ಮಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಕಾಂಗ್ರೆಸ್ ಜನರಲ್ಲಿ ತಪ್ಪು ಮಾಹಿತಿ ಹರಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಇದಕ್ಕೆ ಪ್ರತಿಯಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ನವೆಂಬರ್ 6ರಂದು ಮಂಗಳೂರು ವಿಭಾಗ ಮಟ್ಟದಲ್ಲಿ ‘ಪ್ರಜಾಪ್ರಭುತ್ವ ಉಳಿಸಿ–ಅರಾಜಕತೆ ಅಳಿಸಿ’ ಬೃಹತ್ ಪಾದಯಾತ್ರೆ ಹಾಗೂ ಸಾರ್ವಜನಿಕ ಸಭೆ ಆಯೋಜಿಸಿದೆ. ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಿಂದ 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದು, ಮಂಗಳೂರು ನಗರ ದಕ್ಷಿಣ ಕ್ಷೇತ್ರವೊಂದರಿಂದಲೇ 5 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಗರದ ಕ್ಲಾಕ್ ಟವರ್ ಬಳಿಯ ಮಿನಿ ವಿಧಾನಸೌಧದಿಂದ ಪಾದಯಾತ್ರೆ ಆರಂಭವಾಗಲಿದೆ. ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಹಾಗೂ ಚಂಡೆಯೊಂದಿಗೆ ಸಾಗುವ ಪಾದಯಾತ್ರೆ ಕದ್ರಿ ಮೈದಾನ ತಲುಪಲಿದ್ದು, ಅಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಹಾಗೂ ಮಲಯಾಳಂ ನಟ ಸುರೇಶ್ ಗೋಪಿ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಲಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯುವಜನರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ದೇಶದಲ್ಲಿ 7 ಹೊಸ ಐಐಟಿಗಳು, 8 ಕೇಂದ್ರೀಯ ವಿದ್ಯಾಲಯಗಳು ಆರಂಭವಾಗಿವೆ. 2014ರ ಮೊದಲು 387 ವೈದ್ಯಕೀಯ ಕಾಲೇಜುಗಳಿದ್ದರೆ, ಕಳೆದ 12 ವರ್ಷಗಳಲ್ಲಿ 431 ಹೊಸ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಕೌಶಲ್ಯಾಭಿವೃದ್ಧಿ ಸಚಿವಾಲಯದ ಸ್ಥಾಪನೆ, ನವೋದ್ಯಮಗಳಿಗೆ ಉತ್ತೇಜನ ಹಾಗೂ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ದೇಶದಲ್ಲಿ 2,12,283 ನವೋದ್ಯಮಗಳು ಆರಂಭವಾಗಿದ್ದು, ಅವುಗಳಲ್ಲಿ 21,601 ಕರ್ನಾಟಕದಲ್ಲಿವೆ ಎಂದು ತಿಳಿಸಿದರು.
ಎಸ್ಐಆರ್ ಕುರಿತು ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತವಾಗಿವೆ. ದೇಶದಲ್ಲಿ ಈ ಹಿಂದೆ 12 ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ನಡೆದಿದ್ದು, ಈ ಪೈಕಿ 10 ಬಾರಿ ಕಾಂಗ್ರೆಸ್ ಆಡಳಿತಾವಧಿಯಲ್ಲೇ ನಡೆದಿವೆ. ಆದರೂ ಈಗ ಕಾಂಗ್ರೆಸ್ ಪ್ರಜಾಪ್ರಭುತ್ವದ ಹೆಸರಿನಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದರು..
ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವುದನ್ನು ಕಾಂಗ್ರೆಸ್ ನಾಯಕರು ಸಹಿಸಿಕೊಳ್ಳುತ್ತಿಲ್ಲ. ವಿದೇಶಿ ಶಕ್ತಿಗಳ ಜತೆಗೂಡಿ ದೇಶದಲ್ಲಿ ಅಶಾಂತಿ ಮತ್ತು ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿನ ಭ್ರಷ್ಟಾಚಾರ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ, ತೆರಿಗೆ ಹಾಗೂ ಬೆಲೆ ಏರಿಕೆ ವಿಚಾರಗಳನ್ನೂ ಪ್ರಸ್ತಾಪಿಸಿರುವ ಬಿಜೆಪಿ, ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.
ಮಂಡಲ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ ಎಂ., ಯುವ ಮೋರ್ಚಾ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ವಿನೋದ್ ಮೆಂಡನ್, ಸುರೇಖಾ ಹೆಗ್ಡೆ, ಸುಕೇಶ್ ಅಳಪೆ ಹಾಗೂ ಪ್ರವೀಣ್ ನಿಡ್ಡೇಲ್ ಉಪಸ್ಥಿತರಿದ್ದರು.



