ಮಂಗಳೂರು: ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಹದಗೆಟ್ಟಿರುವ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸಲು ಸಮಗ್ರ ಒಳಚರಂಡಿ ಯೋಜನೆಗೆ ಕಾಲಮಿತಿಯ ಕಾರ್ಯಯೋಜನೆ ರೂಪಿಸಿ ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಸಾರ್ವಜನಿಕ ಉದ್ಯಮಗಳ ಸಮಿತಿಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರನ್ನೊಳಗೊಂಡ ಸಮಿತಿಯು ಮಂಗಳೂರಿನಲ್ಲಿ ನಡೆಸಿದ ಸ್ಥಳ ಪರಿಶೀಲನೆಯ ಆಧಾರದಲ್ಲಿ ಈ ಶಿಫಾರಸು ಮಾಡಿದೆ. ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸಮಾಲೋಚಕರ ನೇಮಕದ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಯಲಿದೆ ಎಂದರು.
ನಗರದ ಜನಸಂಖ್ಯೆ ಹೆಚ್ಚಳ, ವೇಗದ ನಗರೀಕರಣ ಹಾಗೂ ಸಮರ್ಪಕ ನೈರ್ಮಲ್ಯ ವ್ಯವಸ್ಥೆಯ ಅಗತ್ಯವನ್ನು ಗಮನಿಸಿ ಭೂಗತ ಒಳಚರಂಡಿ ಕಾಮಗಾರಿಗಳನ್ನು ಆದ್ಯತೆಯಲ್ಲಿ ಕೈಗೊಳ್ಳಬೇಕಿದೆ. ಒಳಚರಂಡಿ ಅವ್ಯವಸ್ಥೆಯಿಂದ ಜಲಮೂಲಗಳ ಮಾಲಿನ್ಯ, ಸಾರ್ವಜನಿಕ ಆರೋಗ್ಯ ಸಮಸ್ಯೆ ಹಾಗೂ ಅನೈರ್ಮಲ್ಯ ಹೆಚ್ಚುತ್ತಿದೆ. ಸಂಸ್ಕರಿಸಿದ ನೀರನ್ನು ಮರುಬಳಕೆಗೆ ಬಳಸುವ ವ್ಯವಸ್ಥೆಯನ್ನೂ ಹೊಸ ಯೋಜನೆಯಲ್ಲಿ ಸೇರಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ ಎಂದರು.
ಪ್ರಸ್ತಾವಿತ ಯೋಜನೆಗೆ ಸುಮಾರು ₹1,250 ಕೋಟಿ ವೆಚ್ಚ ಆಗುವ ಅಂದಾಜಿದ್ದು, ಅಗತ್ಯ ಅನುಮೋದನೆ, ಅನುದಾನ ಹಾಗೂ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸೂಚಿಸಿದೆ ಎಂದರು.
ನಗರದ ಒಳಚರಂಡಿ ವ್ಯವಸ್ಥೆ ಹಲವು ದಶಕಗಳಿಂದ ಸಮರ್ಪಕವಾಗಿ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದ ಐವನ್ ಡಿಸೋಜಾ, ರಾಜಕೀಯ ಆರೋಪ-ಪ್ರತ್ಯಾರೋಪ ಬದಿಗಿಟ್ಟು ಸ್ಥಳೀಯ ಶಾಸಕರು, ಸಂಸದರು ಹಾಗೂ ಸರ್ಕಾರಗಳು ಒಗ್ಗಟ್ಟಿನಿಂದ ಸಮಗ್ರ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶಶಿಧರ ಹೆಗ್ಡೆ, ಅಪ್ಪಿ, ಪ್ರಕಾಶ್ ಸಾಲಿಯಾನ್, ಭಾಸ್ಕರ ರಾವ್, ಮೀನಾ ಟೆಲ್ಲಿಸ್, ನಾಗೇಂದ್ರ ಕುಮಾರ್, ರೆಹಮಾನ್ ಹಾಗೂ ನವೀನ್ ಡಿಸೋಜ ಇದ್ದರು.
ಎಸ್‌ಐಆರ್ ಪ್ರಕ್ರಿಯೆ ಆಮೆಗತಿ: ಐವನ್ ಡಿಸೋಜ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ತಿದ್ದುಪಡಿ (ಎಸ್‌ಐಆರ್) ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದ್ದು, ಅದಕ್ಕೆ ವೇಗ ನೀಡಬೇಕು. ಬಿಎಲ್‌ಒಗಳಿಗೆ ಅಗತ್ಯ ತರಬೇತಿ ಹಾಗೂ ತಾಂತ್ರಿಕ ನೆರವು ಒದಗಿಸಿ, ತಜ್ಞರ ಸಹಾಯದೊಂದಿಗೆ ಪ್ರತಿಯೊಬ್ಬ ಮತದಾರರನ್ನು ತಲುಪುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಐವನ್ ಡಿಸೋಜ ಆಗ್ರಹಿಸಿದರು.
What do you feel about this post?
Like
Love
Happy
Haha
Sad



