ಕಾರವಾರ: ನಗರದಲ್ಲಿ ಭಾನುವಾರ ಬೀಸಿದ ಭಾರೀ ಗಾಳಿಗೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ನಗರಸಭೆ ಪಕ್ಕದಲ್ಲಿ ಇರುವ ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿಗೆ ತೀವ್ರ ಹಾನಿ ಉಂಟಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯಕ್ಕೆ ಸಂಬಂಧಿಸಿದ ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿ ಮೇಲೆ ಮರ ಬಿದ್ದ ಪರಿಣಾಮ ಕಟ್ಟಡಕ್ಕೆ ಭಾರೀ ಹಾನಿ ಆಗಿದೆ. ಕಚೇರಿಯಲ್ಲಿದ್ದ ದಾಖಲೆಗಳು ಹಾಗೂ ಇತರ ಸಾಮಗ್ರಿಗಳಿಗೂ ಹಾನಿ ಆಗಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಕಚೇರಿಯಲ್ಲಿದ್ದ ಪ್ರಮುಖ ಕಡತಗಳನ್ನು ಸುರಕ್ಷಿತವಾಗಿ ಹೊರತೆಗೆದು ಸ್ಥಳಾಂತರಿಸುವ ಕಾರ್ಯವನ್ನು ಅಗ್ನಿಶಾಮಕ ಸಿಬ್ಬಂದಿ ಮಾಡಿದ್ದಾರೆ.
ಇದೇ ವೇಳೆ ನಗರದ ಅಳ್ವೇವಾಡ ಪ್ರದೇಶದಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಹಲವು ವಾಹನಗಳು ಜಖಂಗೊಂಡಿವೆ. ಮಿನ್‌ಕೃಷ್ ರಸ್ತೆಯಲ್ಲೂ ಮರ ಉರುಳಿ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಬಳಿಕ ತೆರವು ಕಾರ್ಯ ಕೈಗೊಳ್ಳಲಾಯಿತು.
What do you feel about this post?
Like
Love
Happy
Haha
Sad



