ಉ.ಕ ಜಿಲ್ಲೆಯಲ್ಲಿ ದತ್ತು ಮಕ್ಕಳ ಪ್ರಕ್ರಿಯೆ; ಮೂರು ಮಕ್ಕಳಿಗೆ ಸ್ವದೇಶಿ, ಒಂದು ಮಗುವಿಗೆ ವಿದೇಶಿ ದತ್ತು ಪ್ರಕ್ರಿಯೆ ಭಾಗ್ಯ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಕಾರವಾರ: ಅನಾಥ, ತ್ಯಜಿಸಲ್ಪಟ್ಟ ಹಾಗೂ ಪಾಲಕರ ಆರೈಕೆಯಿಂದ ವಂಚಿತ ಮಕ್ಕಳಿಗೆ ಶಾಶ್ವತ ಕುಟುಂಬ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ದತ್ತು ಪ್ರಕ್ರಿಯೆಗೆ ಹೆಚ್ಚಿನ ಚುರುಕು ನೀಡಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ಎನ್. ತಿಳಿಸಿದ್ದಾರೆ.

<

ದತ್ತು ಪ್ರಕ್ರಿಯೆಯನ್ನು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ–2015 ಹಾಗೂ ದತ್ತು ನಿಯಮಾವಳಿ–2022ರ ಪ್ರಕಾರ ನಡೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮಕ್ಕಳ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸ್ವದೇಶಿ ದತ್ತು ಪ್ರಕ್ರಿಯೆಯಲ್ಲಿ ಭಾರತೀಯ ನಾಗರಿಕರು ದೇಶದೊಳಗಿನ ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ಪಡೆಯಬಹುದು. ಇದಕ್ಕಾಗಿ ಅರ್ಜಿದಾರರು ಅಧಿಕೃತ ಜಾಲತಾಣದಲ್ಲಿ ಹೆಸರು ನೋಂದಾಯಿಸಬೇಕು. ಬಳಿಕ ಕುಟುಂಬದ ಹಿನ್ನೆಲೆ ಪರಿಶೀಲನೆ, ಮಗುವನ್ನು ದತ್ತು ಪಡೆಯಲು ಕಾನೂನುಬದ್ಧವಾಗಿ ಮುಕ್ತ ಎಂದು ಮಕ್ಕಳ ಕಲ್ಯಾಣ ಸಮಿತಿಯ ಘೋಷಣೆ, ನ್ಯಾಯಾಲಯದ ಅನುಮತಿ ಸೇರಿದಂತೆ ಎಲ್ಲ ಹಂತಗಳನ್ನು ಪೂರ್ಣಗೊಳಿಸಬೇಕು ಎಂದು ವಿವರಿಸಿದರು.

ವಿದೇಶಿ ದತ್ತು ಪ್ರಕ್ರಿಯೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತೀಯರು, ಸಾಗರೋತ್ತರ ಭಾರತೀಯ ಕಾರ್ಡ್‌ದಾರರು ಹಾಗೂ ವಿದೇಶಿ ನಾಗರಿಕರು ಅಧಿಕೃತ ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳ ಪರಿಶೀಲನೆ, ನ್ಯಾಯಾಲಯದ ಅನುಮತಿ ಹಾಗೂ ಮಗುವಿನ ಪ್ರಯಾಣಕ್ಕೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿದ ಬಳಿಕ ದತ್ತು ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ನಂತರ ಮಗುವಿನ ಬೆಳವಣಿಗೆ ಕುರಿತು ನಿಗದಿತ ಅವಧಿಯಲ್ಲಿ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದರು.

ನಾಲ್ಕು ಮಕ್ಕಳು ದತ್ತು ಪ್ರಕ್ರಿಯೆ: 2026–27ನೇ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ಮಕ್ಕಳನ್ನು ಸ್ವದೇಶಿ ದತ್ತು ಹಾಗೂ ಒಂದು ಮಗುವನ್ನು ವಿದೇಶಿ ದತ್ತು ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಲಲಕ್ಷ್ಮಿಪ್ರಿಯಾ ಅವರ ಅನುಮೋದನೆಯೊಂದಿಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ದತ್ತು ಪಡೆಯುವವರು ಕಾನೂನುಬದ್ಧ ವಿಧಾನವನ್ನೇ ಅನುಸರಿಸಬೇಕು. ಕಾನೂನುಬಾಹಿರವಾಗಿ ಮಕ್ಕಳನ್ನು ದತ್ತು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಸಾರ್ವಜನಿಕರು ದತ್ತು ಪ್ರಕ್ರಿಯೆಯ ಕುರಿತು ಸಂಪೂರ್ಣ ಮಾಹಿತಿ ಪಡೆದು ಮಾತ್ರ ಮುಂದುವರಿಯಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಲಕ್ಷ್ಮಿ‍ಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ರಕ್ಷಣಾಧಿಕಾರಿಗಳು ಹಾಗೂ ಸಹಾಯ ಟ್ರಸ್ಟ್‌ನ ಮುಖ್ಯಸ್ಥರು ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *