ಮಂಗಳೂರು: ಕಳೆದ ಕೆಲ ದಿನಗಳಿಂದ ವ್ಯಾಪಕವಾಗಿ ಸುರಿದ ಮಳೆಗೆ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗುರಿ ಪ್ರದೇಶದಲ್ಲಿ ಮನೆ ಮೇಲೆ ತಡೆಗೋಡೆಯೊಂದು ಕುಸಿದು ಬಿದ್ದು ಪರಿಣಾಮ ಮಹಿಳೆ ಸೇರಿದಂತೆ ಮೂರು ಮಂದಿ ದುರಂತ ಸಾವು ಕಂಡಿರುವ ಘಟನೆ ನಡೆದಿದೆ.
ಹೆಂಚಿನ ಚಾವಣಿಯ ಮನೆ ಕುಸಿದ ಪರಿಣಾಮ ಮಹಿಳೆ ಹಾಗೂ ಇಬ್ಬರು ಬಾಲಕಿಯರು ಸಾವು ಕಂಡಿದ್ದಾರೆ.
ಘಟನೆ ಸಂಭವಿಸಿದ ವೇಳೆ ಮನೆಯಲ್ಲಿ ಒಟ್ಟು ಆರು ಮಂದಿ ಇದ್ದರು ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡ ಸ್ಥಳಕ್ಕೆ ದೌಡಾಯಿಸಿ ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಅವಶೇಷಗಳಡಿ ಸಿಲುಕಿಕೊಂಡಿದ್ದ ಅಲ್ಕಾ (14), ಅನುಷಾ (11) ಹಾಗೂ ಬಾಲಕೃಷ್ಣ (48) ಅವರನ್ನು ಸುರಕ್ಷಿತವಾಗಿ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವಶೇಷಗಳಡಿ ಸಿಲುಕಿದ್ದ ಶಾಂತ (46), ಅನಾಮಿಕ ಚೌರಾಸಿಯಾ (8), ಪರಿ (4) ಅವರನ್ನು ಹೊರತೆಗೆದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿದೆ. ರಕ್ಷಣಾ ಕಾರ್ಯದಲ್ಲಿ ಅಲ್ಕಾ (14), ಅನುಷಾ (11), ಬಾಲಕೃಷ್ಣ( 48) ಅಪಾಯದಿಂದ ಪಾರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲತಃ ಬಿಹಾರ ರಾಜ್ಯದವರಾದ ಬಾಲಕೃಷ್ಣ ಅವರ ಕುಟುಂಬ 20 ವರ್ಷಗಳಿಂದ ಕಂಕನಾಡಿ ಗ್ರಾಮದ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದ ಪ್ರದೇಶದಲ್ಲಿ ವಾಸಿಸುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್, ಪಾಲಿಕೆ ಕಮಿಷನರ್ ರವಿಚಂದ್ರ ನಾಯಕ್ ಸೇರಿದಂತೆ ಹಲವು ಭೇಟಿ ನೀಡಿದರು.
ನಾಗೂರಿ ದುರಂತ: ಸಚಿವ ಖಾದರ್ ನವ ದೆಹಲಿ ಪ್ರವಾಸ ರದ್ದು
ನಗರದ ನಾಗೂರಿಯಲ್ಲಿ ಮನೆ ಕುಸಿದು ಮೂವರು ಸಾವನ್ನಪ್ಪಿರುವ ಘಟನೆಯ ಹಿನ್ನಲೆಯಲ್ಲಿ ನವದೆಹಲಿ ಪ್ರವಾಸದಲ್ಲಿ ಇರುವ ಆರೋಗ್ಯ ಸಚಿವ ಯು. ಟಿ. ಖಾದರ್ ಅವರು ತಮ್ಮ ಭೇಟಿಯನ್ನು ಮೊಟಕುಗೊಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣವೇ ತ್ವರಿತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಗಾಯಾಳುಗಳಿಗೆ ಸರಕಾರದ ವತಿಯಿಂದಲೇ ಆಸ್ಪತ್ರೆಯಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ಹಾಗೂ ಮೃತರ ಕುಟುಂಬದವರಿಗೆ ಇಂದೇ ಪರಿಹಾರ ಮೊತ್ತ ನೀಡಲು ಅವರು ಸೂಚನೆ ನೀಡಿದ್ದಾರೆ. ಸಚಿವ ಖಾದರ್ ಅವರು ಬುಧವಾರ ಮಧ್ಯಾಹ್ನ ಮಂಗಳೂರು ತಲುಪಲಿದ್ದು, ಘಟನಾ ಸ್ಥಳಕ್ಕೆ ಹಾಗೂ ಚಿಕಿತ್ಸೆ ಪಡೆಯುವವರನ್ನು ಭೇಟಿ ಮಾಡಲಿದ್ದಾರೆ.
What do you feel about this post?
Like
Love
Happy
Haha
Sad



