ಉಡುಪಿ: ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿಸುವ ಶಿಕ್ಷಕರನ್ನು ಸದಾ ಗೌರವದಿಂದ ಸ್ಮರಿಸಬೇಕು ಎಂದು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಹೇಳಿದರು.
ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜನನಿ ತಾನೆ ಮೊದಲ ಗುರು’ ಎಂಬ ನುಡಿಯಂತೆ ವಿದ್ಯೆ ಕಲಿಸಿದ ಶಿಕ್ಷಕರು ಹಾಗೂ ಜನ್ಮ ನೀಡಿದ ತಂದೆ–ತಾಯಿಯನ್ನು ಗೌರವಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಶಿಕ್ಷಕರು ತಮ್ಮ ಉಸಿರನ್ನು ವಿದ್ಯಾರ್ಥಿಗಳ ಉಸಿರಿನೊಂದಿಗೆ ಬೆಸೆಯುವ ಮೂಲಕ ಅವರ ಭವಿಷ್ಯ ರೂಪಿಸುತ್ತಾರೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ವಾಣಿಜ್ಯ ತೆರಿಗೆ ಉಪ ಆಯುಕ್ತ ಹೊಳೆಯಪ್ಪ ಎಚ್. ಮಾತನಾಡಿ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗೆ ಅತಿಥಿಯಾಗಿ ಬರುವುದಕ್ಕಿಂತ ವಿದ್ಯಾರ್ಥಿಯಾಗಿ ಬರುವುದರಲ್ಲಿ ಸಂತೋಷವಿದೆ. ತಮ್ಮ ಮಗಳು ಇಲ್ಲಿ ವಿದ್ಯಾಭ್ಯಾಸ ಮಾಡಿ ವೈದ್ಯಕೀಯ ಶಿಕ್ಷಣಕ್ಕೆ ಸೇರ್ಪಡೆಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಸಂಸ್ಥೆಯ ಅಧ್ಯಕ್ಷರ ಮಾರ್ಗದರ್ಶನದ ನುಡಿಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪೋಷಕರಿಗೂ ಉತ್ತಮ ದಾರಿ ತೋರಿಸುವಂತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಚಿತ್ರಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಉಮಾ ಮಾಧವಿ, ಮುಟ್ಲುಪಾಡಿ–ಮುನಿಯಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ರಮೇಶ್ ಕಲ್ಮಾಡಿ, ಬ್ರಹ್ಮಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಕುಮುದಾ ಎಸ್. ಹಾಗೂ ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಶಿಕ್ಷಕಿ ಉಷಾ ಬಾಯಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಮಾ ಮಾಧವಿ, ವಿದ್ಯಾರ್ಥಿಗಳು ಸನ್ನಡತೆಯೊಂದಿಗೆ ಮುನ್ನಡೆಯಬೇಕು. ಜ್ಞಾನಸುಧಾ ಸಂಸ್ಥೆ ನಾಡಿನಾದ್ಯಂತ ವಿಸ್ತರಿಸಲಿ ಎಂದು ಹಾರೈಸಿದರು.
ರಮೇಶ್ ಕಲ್ಮಾಡಿ ಮಾತನಾಡಿ, ಹಲವು ಪ್ರಶಸ್ತಿಗಳನ್ನು ಪಡೆದಿದ್ದರೂ ಜ್ಞಾನಸುಧಾದಲ್ಲಿ ದೊರೆತ ಸನ್ಮಾನ ಹೃದಯ ತುಂಬುವಂತಾಗಿದೆ ಎಂದರು. ಕುಮುದಾ ಎಸ್. ಅವರು ತಂದೆ, ತಾಯಿ ಹಾಗೂ ಗುರುಗಳನ್ನು ಗೌರವಿಸುವ ಗುಣ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಉಷಾ ಬಾಯಿ ಅವರು ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆಯುವಂತೆ ಶುಭ ಹಾರೈಸಿದರು.
ಟ್ರಸ್ಟಿ ವಿದ್ಯಾ ಸುಧಾಕರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಶ್ರೀನಿಧಿ ಭಾಗವತ್, ಜೆ.ಇ.ಎ. ಸಂಯೋಜಕ ಪ್ರವೀಣ್ ಜೋನ್ ಡಿ ಅಲ್ಮೆಡಾ ಇದ್ದರು. ಉಪಪ್ರಾಂಶುಪಾಲ ಪ್ರಕಾಶ್ ಜೋಗಿ ವಂದಿಸಿದರು. ಭೌತಶಾಸ್ತ್ರ ಉಪನ್ಯಾಸಕ ದರ್ಶನ್ ಕಾರ್ಯಕ್ರಮ ನಿರೂಪಿಸಿದರು.
What do you feel about this post?
Like
Love
Happy
Haha
Sad





