ಮಂಗಳೂರು: ಯುವಜನರನ್ನು ಯೋಜನೆಯ ವ್ಯಾಪ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ತರಲು ಹಾಗೂ ನೋಂದಣಿ ಪ್ರಕ್ರಿಯೆ ತ್ವರಿತಗೊಳಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಸೋಮವಾರ ಭಾರತ್ ಜೋಡೋ ಯುವ ಸಂಘ ಯೋಜನೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ ನಿರಂತರವಾಗಿ ಅನುಸರಣೆ ನಡೆಸಬೇಕು. 18 ವರ್ಷ ಮೇಲ್ಪಟ್ಟ ಯುವಜನರಿಗೆ ಯೋಜನೆಯ ಪ್ರಯೋಜನಗಳ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸಲು ಮಾಜಿ ಪಾಲಿಕೆ ಸದಸ್ಯರನ್ನು ಸಂಪರ್ಕಿಸಬೇಕು. 18 ವರ್ಷ ಮೇಲ್ಪಟ್ಟ ಯುವಕರನ್ನು ಗುರುತಿಸಿ ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಬೂತ್ ಮಟ್ಟದ ಅಧಿಕಾರಿಗಳ ಸಹಕಾರದೊಂದಿಗೆ ಮತದಾರರ ಪಟ್ಟಿಯನ್ನು ಪಡೆಯಬೇಕು ಎಂದರು.
ಯೋಜನೆಯ ಅನುಷ್ಠಾನ ಕುರಿತು ಸಲಹೆ ನೀಡಿದ ಅಧಿಕಾರಿಯೊಬ್ಬರು, ಡಿಡಿಪಿಐ, ಡಿಡಿಪಿಯು ಹಾಗೂ ಪದವಿ ಕಾಲೇಜುಗಳ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸುವುದರಿಂದ ನೋಂದಣಿ ಪ್ರಕ್ರಿಯೆ ಸುಗಮವಾಗಲಿದೆ ಎಂದು ತಿಳಿಸಿದರು. ಇದಕ್ಕೆ ಸಮ್ಮತಿಸಿದ ಆಯುಕ್ತರು, ಸುತ್ತೋಲೆ ಸಿದ್ಧಪಡಿಸಿ ಹೊರಡಿಸುವಂತೆ ಸೂಚಿಸಿದರು. ಶಿಕ್ಷಣ ಸಂಸ್ಥೆಗಳು ಯೋಜನೆಯ ಅನುಷ್ಠಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವರಿಕೆ ಮಾಡಿಕೊಡಬೇಕು ಎಂದರು.
ಕರ್ನಾಟಕ ಸರ್ಕಾರದ ನಿರ್ದೇಶನದಂತೆ ಅಂತಿಮ ನೋಂದಣಿ ಪ್ರಕ್ರಿಯೆ ಆ.31ರೊಳಗೆ ಪೂರ್ಣಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ನಿಗದಿತ ಅವಧಿಯಲ್ಲಿ ಕಾರ್ಯ ಪೂರ್ಣಗೊಳಿಸಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ಪಾಲಿಕೆಯ ನಗರ ಯೋಜನೆ, ಆರೋಗ್ಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಇದ್ದರು.


