ಮಂಗಳೂರು: ಕಾಂಗ್ರೆಸ್ ಅಧ್ಯಕ್ಷ ಹಾಗೂ ದಲಿತ ಸಮುದಾಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿರುವ ಪ್ರಕರಣದಲ್ಲಿ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸುವ ಬದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ದಿನೇಶ್ ಮುಳೂರು ಅವರು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆ.10 ರಂದು ಉತ್ತರ ಪ್ರದೇಶದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದರು. ಮರುದಿನ ಅದೇ ಸ್ಥಳದಲ್ಲಿ ಹೋಮ–ಹವನ ನಡೆಸಿ ಶುದ್ಧೀಕರಣ ಮಾಡಿರುವುದು ಜಾತಿ ತಾರತಮ್ಯ ಹಾಗೂ ಖರ್ಗೆ ಅವರಿಗೆ ಮಾಡಿದ ಅವಮಾನ ಆಗಿದೆ ಎಂದು ಆರೋಪಿಸಿದರು.
ಘಟನೆಯನ್ನು ಖಂಡಿಸಿ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದರು. ಆದರೆ, ಇದಕ್ಕೆ ಪ್ರತಿಯಾಗಿ ಬಿಜೆಪಿ ಹಾಗೂ ಸಂಘ ಪರಿವಾರದವರು ರಾಹುಲ್ ಗಾಂಧಿ ವಿರುದ್ಧವೇ ಎಫ್‌ಐಆರ್ ದಾಖಲಿಸಿರುವುದು ದಲಿತ ಸಮುದಾಯದ ಬಗ್ಗೆ ಅವರ ನಿಲುವನ್ನು ತೋರಿಸುತ್ತದೆ ಎಂದರು.
ಖರ್ಗೆ ಅವರಿಗೆ ಅವಮಾನ ಮಾಡಿದ ಆರೋಪದ ಕುರಿತು ಎಫ್‌ಐಆರ್ ದಾಖಲಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ದೇಶದ ಸಮಸ್ತ ದಲಿತ ಸಮುದಾಯದ ವಿರುದ್ಧ ಎಫ್‌ಐಆರ್ ದಾಖಲಿಸಿದಂತಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರ ಕುಟುಂಬ ದೇಶದ ಸ್ವಾತಂತ್ರ್ಯ ಹೋರಾಟ ಹಾಗೂ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರು ದೇಶದ ಅಭಿವೃದ್ಧಿಗೆ ಹಲವು ಕೊಡುಗೆ ನೀಡಿದ್ದಾರೆ. ರಾಜೀವ್ ಗಾಂಧಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಉತ್ತೇಜನ ನೀಡುವುದರ ಜತೆಗೆ ಯುವಕರಿಗೆ ಮತದಾನದ ಹಕ್ಕು ದೊರಕಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ದಲಿತರು ಮತ್ತು ಶೋಷಿತ ವರ್ಗಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಶಿಕ್ಷಣ, ಉದ್ಯೋಗ ಸೇರಿದಂತೆ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿತ್ತು. ದೇವದಾಸಿ ಪದ್ಧತಿ, ಮಲ ಹೊರುವ ಪದ್ಧತಿ ಸೇರಿದಂತೆ ಹಲವು ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಕಾನೂನು ಕ್ರಮ ಕೈಗೊಳ್ಳಲಾಗಿತ್ತು ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ನೀಡಿದ ಬಳಿಕವೂ ದಲಿತರ ಅಭಿವೃದ್ಧಿ ಹಾಗೂ ಸಾಮಾಜಿಕ ಸಮಾನತೆಗಾಗಿ ಕಾಂಗ್ರೆಸ್ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆದರೆ, ಸಂವಿಧಾನದ ಆಶಯಗಳನ್ನು ವಿರೋಧಿಸುವ ಮನುವಾದಿ ಮನೋಭಾವಗಳು ಇಂದಿಗೂ ಮುಂದುವರೆದಿವೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಸಫಾಯಿ ಕರ್ಮಚಾರಿ ಘಟಕದ ಜಿಲ್ಲಾಧ್ಯಕ್ಷ ಪ್ರೇಮ್ ನಾಥ್ ಪಿ.ಬಿ. ಬಳ್ಳಾಲ್‌ಬಾಗ್, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಟಿ. ಹೊನ್ನಯ್ಯ ಹಾಗೂ ಪರಿಶಿಷ್ಟ ಜಾತಿ ಘಟಕದ ಕಾರ್ಯದರ್ಶಿ ರವಿ ಸುಂಕದಕಟ್ಟೆ ಇದ್ದರು.
ಶೋಷಿತರ ಧ್ವನಿ ಹತ್ತಿಕ್ಕುವ ಸಂಚು
ಉನ್ನಾವೋ ಪ್ರಕರಣದ ಸಂದರ್ಭದಲ್ಲಿ ದಲಿತರು ಹಾಗೂ ಶೋಷಿತರ ಪರವಾಗಿ ರಾಹುಲ್ ಗಾಂಧಿ ಧ್ವನಿ ಎತ್ತಿದ್ದರು. ಇದೀಗ ಖರ್ಗೆ ಅವರಿಗೆ ಅವಮಾನವಾಗಿದೆ ಎಂದು ಆರೋಪಿಸಲಾಗುತ್ತಿರುವ ಸಂದರ್ಭದಲ್ಲೂ ದಲಿತರ ಪರವಾಗಿ ಅವರು ನಿಂತಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ದಲಿತರು ಹಾಗೂ ಶೋಷಿತರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ದೇಶದ ದಲಿತರು ಹಾಗೂ ಶೋಷಿತ ವರ್ಗದ ಜನರು ರಾಹುಲ್ ಗಾಂಧಿ ಅವರೊಂದಿಗೆ ನಿಲ್ಲಲಿದ್ದಾರೆ ಎಂಬ ಸಂದೇಶವನ್ನು ಈ ಸಂದರ್ಭದಲ್ಲಿ ನೀಡುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ದಿನೇಶ್ ಮುಳೂರು ತಿಳಿಸಿದರು.
What do you feel about this post?
Like
Love
Happy
Haha
Sad





