ಮೃತದೇಹ ನೀಡದ ಆಸ್ಪತ್ರೆಗಳ ವಿರುದ್ಧ ಸಚಿವ ಖಾದರ್ ಚಾಟಿ

ಅಂತರ ಜಿಲ್ಲೆ ಆರೋಗ್ಯ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಚಿಕಿತ್ಸೆಯ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸದೆ ಸತಾಯಿಸುವ ಖಾಸಗಿ ಆಸ್ಪತ್ರೆಗಳ ಧೋರಣೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಇಂತಹ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶ ಕಲ್ಪಿಸುವ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತರುವ ಕುರಿತು ಆರೋಗ್ಯ ಇಲಾಖೆ ಗಂಭೀರ ಚಿಂತನೆ ನಡೆಸಿದೆ ಎಂದು ಭಾನುವಾರ ಮಂಗಳೂರಿನಲ್ಲಿ ಸಚಿವ ಯು.ಟಿ. ಖಾದರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಹಿಂದೆ ಜಾರಿಗೊಳಿಸಲಾಗಿದ್ದ ಕಾನೂನುಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳದ ಹಿನ್ನೆಲೆಯಲ್ಲಿ ಹೊಸ ನಿಯಮಗಳ ಮೂಲಕ ಲೋಪದೋಷಗಳನ್ನು ಸರಿಪಡಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಳೆಯ ನಿಯಮಗಳ ಬದಲಾವಣೆಗೆ ಚಿಂತನೆ

2007 ಮತ್ತು 2018ರ ಅವಧಿಯಲ್ಲಿ ಈ ಸಂಬಂಧ ಕಾನೂನುಗಳನ್ನು ರೂಪಿಸಲಾಗಿದ್ದರೂ, ಅವುಗಳ ಅನುಷ್ಠಾನ ಸಮರ್ಪಕವಾಗಿ ನಡೆದಿಲ್ಲ. 2018ರ ನಿಯಮದ ಪ್ರಕಾರ, ಶ್ಯೂರಿಟಿ ಪಡೆದು ಮೃತದೇಹವನ್ನು ಹಸ್ತಾಂತರಿಸುವ ವ್ಯವಸ್ಥೆ ಇತ್ತು. ಬಾಕಿ ಮೊತ್ತ ಪಾವತಿಸದಿದ್ದರೆ ಆಸ್ಪತ್ರೆಗಳು ಸಂಬಂಧಪಟ್ಟವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅವಕಾಶವಿತ್ತು. ಆದರೆ, ಕಾನೂನು ಹೋರಾಟದ ಭೀತಿಯಿಂದ ಬಡ ಕುಟುಂಬಗಳು ಸಾಲ ಮಾಡಿ ಚಿಕಿತ್ಸಾ ವೆಚ್ಚ ಪಾವತಿಸುವ ಅನಿವಾರ್ಯತೆಗೆ ಸಿಲುಕುತ್ತಿವೆ ಎಂದು ಅವರು ವಿವರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಹಳೆಯ ನಿಯಮಗಳಲ್ಲಿನ ಲೋಪದೋಷಗಳನ್ನು ನಿವಾರಿಸಿ, ಮೃತದೇಹ ಹಸ್ತಾಂತರಿಸುವ ವಿಚಾರದಲ್ಲಿ ಆಸ್ಪತ್ರೆಗಳು ಕಟ್ಟುನಿಟ್ಟಿನ ನಿಯಮ ಪಾಲಿಸುವಂತೆ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೊಸ ನಿಯಮಾವಳಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸಲಾಗುವುದು. ಸಭೆಯಲ್ಲಿ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಚಿಕಿತ್ಸಾ ವೆಚ್ಚದ ಬಾಕಿ ಮೊತ್ತದ ಕಾರಣಕ್ಕೆ ಮೃತದೇಹ ಹಸ್ತಾಂತರವನ್ನು ತಡೆಹಿಡಿಯುವ ಪ್ರಕರಣಗಳಿಗೆ ಕಡಿವಾಣ ಹಾಕುವುದು ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳ ಹಿತ ಕಾಪಾಡುವುದು ಈ ಪ್ರಸ್ತಾವಿತ ಕ್ರಮದ ಉದ್ದೇಶವಾಗಿದೆ ಎಂದರು.

Leave a Reply

Your email address will not be published. Required fields are marked *