ಕಾರವಾರ: ವಿವಿಧ ಇಲಾಖೆಗಳ ವಿರುದ್ಧ ಸಾರ್ವಜನಿಕರು ಸಲ್ಲಿಸಿದ್ದ ದೂರುಗಳು ಹಾಗೂ ಬಾಕಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಬುಧವಾರ ವಿಚಾರಣೆ ನಡೆಸಿ, ಅರ್ಹ ಪ್ರಕರಣಗಳಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳು, ದೂರುದಾರರು ಹಾಗೂ ಎದುರುದಾರರ ಸಭೆಯಲ್ಲಿ ಒಟ್ಟು 80 ಪ್ರಕರಣಗಳ ವಿಚಾರಣೆ ನಡೆಸಲಾಯಿತು. ದೂರುದಾರರು ತಮ್ಮ ಅಹವಾಲುಗಳನ್ನು ನೇರವಾಗಿ ಮಂಡಿಸಲು ಹಾಗೂ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಯಿತು. ಎದುರುದಾರರಿಗೂ ತಮ್ಮ ನಿಲುವು ಹಾಗೂ ದಾಖಲೆಗಳನ್ನು ಮಂಡಿಸಲು ಸಮಾನ ಅವಕಾಶ ಕಲ್ಪಿಸಲಾಯಿತು.
ಪ್ರಕರಣಗಳ ವಿಚಾರಣೆ ವೇಳೆ ಸಂಬಂಧಪಟ್ಟ ಅಧಿಕಾರಿಗಳಿಂದ ದೂರುಗಳ ಸ್ಥಿತಿಗತಿ, ಕೈಗೊಂಡಿರುವ ಕ್ರಮ ಹಾಗೂ ಪ್ರಕರಣಗಳು ಬಾಕಿ ಉಳಿದಿರುವುದಕ್ಕೆ ಕಾರಣಗಳ ಕುರಿತು ನ್ಯಾಯಮೂರ್ತಿ ಫಣೀಂದ್ರ ಅವರು ಮಾಹಿತಿ ಪಡೆದರು.
ಗೈರಾದ ದೂರುದಾರರಿಗೂ ನ್ಯಾಯ
ವಿಚಾರಣೆಗೆ ಹಾಜರಾಗದ ದೂರುದಾರರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಅವರ ಅಹವಾಲುಗಳನ್ನು ಆಲಿಸಿದ್ದು ವಿಶೇಷವಾಗಿತ್ತು. ಅರ್ಜಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ ಸಂದರ್ಭದಲ್ಲಿ, ಫಲಾನುಭವಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸೌಲಭ್ಯ ದೊರೆತಿರುವುದನ್ನು ಖಚಿತಪಡಿಸಿಕೊಂಡರು.
ಲೋಕಾಯುಕ್ತದ ವ್ಯಾಪ್ತಿಗೆ ಒಳಪಡದ ಪ್ರಕರಣಗಳಲ್ಲಿ ನ್ಯಾಯಾಲಯದ ಮೂಲಕ ಪರಿಹಾರ ಪಡೆಯಬಹುದಾದ ಮಾರ್ಗಗಳ ಕುರಿತು ದೂರುದಾರರಿಗೆ ಮಾಹಿತಿ ನೀಡಿದರು. ಆರ್ಥಿಕವಾಗಿ ದುರ್ಬಲರಾಗಿರುವವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಕಾನೂನು ನೆರವು ಪಡೆಯಬಹುದು ಎಂದು ಸಲಹೆ ನೀಡಿದರು.
ಐದು ಮನೆಗಳಿಗೆ ನೀರು ಒದಗಿಸಲು ಸೂಚನೆ
ಕುಮಟಾ ತಾಲ್ಲೂಕಿನ ಹಳಕಾರ ಗ್ರಾಮದ ಗುನಗನಕೊಪ್ಪದಲ್ಲಿ ಐದು ಮನೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರಿನ ವಿಚಾರಣೆ ನಡೆಸಿದ ಅವರು, 15 ದಿನಗಳ ಕಾಲಾವಕಾಶದೊಳಗೆ ಸಮಸ್ಯೆ ಪರಿಹರಿಸುವಂತೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಆರೋಗ್ಯ ಇಲಾಖೆಯ ನಿವೃತ್ತ ಸಿಬ್ಬಂದಿಯೊಬ್ಬರು ನಾಲ್ಕು ವರ್ಷಗಳಿಂದ ವೇತನದ ಬಾಕಿ ಮೊತ್ತ ಪಡೆಯಲು ಕಚೇರಿಗಳಿಗೆ ಅಲೆದಾಡುತ್ತಿರುವ ದೂರಿನ ವಿಚಾರಣೆಯಲ್ಲೂ ತ್ವರಿತ ಕ್ರಮಕ್ಕೆ ಸೂಚನೆ ನೀಡಿದರು. ನಿವೃತ್ತ ಸಿಬ್ಬಂದಿಗೆ ಬರಬೇಕಿರುವ ಎಲ್ಲ ವೇತನ ಬಾಕಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಶೀಘ್ರದಲ್ಲಿ ಹಣ ಪಾವತಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ನಿರ್ದೇಶನ ನೀಡಿದರು.

ಗೋಕರ್ಣ ರೈಲು ನಿಲ್ದಾಣದಲ್ಲಿ ಅನಧಿಕೃತವಾಗಿ ಬೈಕ್ ಬಾಡಿಗೆ ನೀಡಲಾಗುತ್ತಿದೆ ಎಂಬ ದೂರಿನ ಕುರಿತು ಈಗಾಗಲೇ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಬೈಕ್ ಬಾಡಿಗೆ ವ್ಯವಹಾರ ನಡೆಯುತ್ತಿರುವುದು ಕಂಡುಬಂದರೆ ಪೊಲೀಸರಿಗೆ ದೂರು ನೀಡುವಂತೆ ದೂರುದಾರರಿಗೆ ನ್ಯಾಯಮೂರ್ತಿ ಫಣೀಂದ್ರ ಸೂಚಿಸಿದರು.
ಯಲ್ಲಾಪುರ ಹಾಗೂ ಮುಂಡಗೋಡ ಬಸ್ ನಿಲ್ದಾಣಗಳಿಗೆ ಸಂಬಂಧಿಸಿದ ದೂರುಗಳನ್ನು ಈಗಾಗಲೇ ಇತ್ಯರ್ಥಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ, ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತದ ಉಪ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದರು.
ಹೋಟೆಲ್ ಪರವಾನಗಿ ನವೀಕರಣದ ತನಿಖೆಗೆ ಸೂಚನೆ
ಮುರ್ಡೇಶ್ವರದ ಹೋಟೆಲೊಂದರ ಜಂಟಿ ಖಾತೆಯ ಪರವಾನಗಿ ನವೀಕರಣ ಹಾಗೂ ತೆರಿಗೆ ಪಾವತಿಗೆ ಸಂಬಂಧಿಸಿದ ದೂರಿನ ವಿಚಾರಣೆಯಲ್ಲಿ, ಜಂಟಿ ಖಾತೆಯಲ್ಲಿದ್ದ ಪರವಾನಗಿಯನ್ನು ಒಬ್ಬರ ಹೆಸರಿಗೆ ನವೀಕರಿಸಿರುವುದು ಹಾಗೂ ತೆರಿಗೆಯನ್ನು ಜಂಟಿ ಖಾತೆದಾರರ ಬದಲಿಗೆ ಒಬ್ಬರ ಹೆಸರಿನಲ್ಲಿ ಮಾತ್ರ ಪಾವತಿಸಿರುವ ಕುರಿತು ಲೋಕಾಯುಕ್ತ ಪೊಲೀಸರಿಂದ ಸಮಗ್ರ ತನಿಖೆ ನಡೆಸುವಂತೆ ನಿರ್ದೇಶನ ನೀಡಿದರು.
ದಾಖಲೆ ನೀಡಲು ವಿಳಂಬ ಮಾಡದಂತೆ ಎಚ್ಚರಿಕೆ
ಸಾರ್ವಜನಿಕರು ಸಲ್ಲಿಸುವ ಮನವಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡಬಾರದು. ವಿಳಂಬದ ಧೋರಣೆ ಅನುಸರಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಎಚ್ಚರಿಕೆ ನೀಡಿದರು.
ಅರ್ಜಿಗಳನ್ನು ಆದಷ್ಟು ಶೀಘ್ರವಾಗಿ ವಿಲೇವಾರಿ ಮಾಡಬೇಕು. ಅನಗತ್ಯವಾಗಿ ಪ್ರಕರಣಗಳನ್ನು ಬಾಕಿ ಉಳಿಸಿದರೆ ಸಂಬಂಧಪಟ್ಟ ಇಲಾಖೆಯ ಮೇಲಿನ ಸಾರ್ವಜನಿಕರ ಗೌರವ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.
ವಿಚಾರಣೆಯಲ್ಲಿ ಕುಮಟಾ ತಾಲ್ಲೂಕಿನ 10, ಮುಂಡಗೋಡ 4, ಶಿರಸಿ 7, ಯಲ್ಲಾಪುರ 7, ಹಳಿಯಾಳ 3, ದಾಂಡೇಲಿ 2, ಭಟ್ಕಳ 11, ಹೊನ್ನಾವರ 5, ಅಂಕೋಲಾ 6 ಹಾಗೂ ಕಾರವಾರ ತಾಲ್ಲೂಕಿನ 27 ದೂರುಗಳನ್ನು ವಿಚಾರಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ., ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರೀಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಷ್ ಶಶಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ದೂರುದಾರರು ಇದ್ದರು.
What do you feel about this post?
Like
Love
Happy
Haha
Sad




