ಕಾರವಾರ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಅ.1ರಂದು ಆಯೋಜಿಸಿರುವ ಅಂತರರಾಜ್ಯ ಚಂಡಮಾರುತ ಅಣಕು ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅಣಕು ಕಾರ್ಯಾಚರಣೆ ನಡೆಯಲಿದೆ. ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
ಚಂಡಮಾರುತದಂತಹ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಎಷ್ಟು ಪರಿಣಾಮಕಾರಿಯಾಗಿ ಸ್ಪಂದಿಸಬಲ್ಲವು ಎಂಬುದನ್ನು ಪರೀಕ್ಷಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜತೆಗೆ ಕಂದಾಯ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆ, ಆರೋಗ್ಯ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಬಂದರು, ಸ್ಥಳೀಯ ಸಂಸ್ಥೆಗಳು ಹಾಗೂ ನೌಕಾಪಡೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಲಿವೆ.
ವಿವಿಧ ವಿಪತ್ತು ಸನ್ನಿವೇಶಗಳ ಅಣಕು
ಚಂಡಮಾರುತದ ಸಂದರ್ಭದಲ್ಲಿ ಸಂಭವಿಸಬಹುದಾದ ಭಾರಿ ಮಳೆ, ಬಿರುಗಾಳಿ, ಸಮುದ್ರದ ಅಬ್ಬರ, ಕಡಲ್ಕೊರೆತ, ಪ್ರವಾಹ, ಮರಗಳು ಉರುಳುವುದು ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗುವಂತಹ ವಿವಿಧ ತುರ್ತು ಪರಿಸ್ಥಿತಿಗಳನ್ನು ಅಣಕು ಕಾರ್ಯಾಚರಣೆಯ ವೇಳೆ ಸೃಷ್ಟಿಸಲಾಗುವುದು.
ಇಂತಹ ಸನ್ನಿವೇಶಗಳನ್ನು ನಿಭಾಯಿಸುವಲ್ಲಿ ವಿವಿಧ ಇಲಾಖೆಗಳ ಸಿದ್ಧತೆ, ತುರ್ತು ಸ್ಪಂದನೆ ಹಾಗೂ ರಕ್ಷಣಾ ಕಾರ್ಯಾಚರಣೆಯ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ. ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಗುರುತಿಸಿರುವ ಪ್ರದೇಶಗಳಲ್ಲಿ ಕೃತಕ ವಿಪತ್ತು ಪರಿಸ್ಥಿತಿಗಳನ್ನು ನಿರ್ಮಿಸಿ ಕಾರ್ಯಾಚರಣೆ ನಡೆಸಲಾಗುವುದು.
ಬೈತಖೋಲ್, ಕದ್ರಾ ಸೇರಿದಂತೆ ಹಲವು ಕಡೆ
ಕಾರವಾರದ ಬೈತಖೋಲ್ ಮತ್ತು ಕದ್ರಾ ಪ್ರದೇಶ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಣಕು ಕಾರ್ಯಾಚರಣೆ ನಡೆಯಲಿದೆ. ಕೆಎಸ್‌ಆರ್‌ಟಿಸಿ ಬಸ್, ಹೊನ್ನಾವರದ ಕಾಸರಕೋಡ್ ಮೀನುಗಾರಿಕಾ ಪ್ರದೇಶ, ಭಟ್ಕಳದ ಮುರುಡೇಶ್ವರ ಕಡಲತೀರ ಹಾಗೂ ಕುಮಟಾ ತಾಲ್ಲೂಕಿನ ತದಡಿ ಮೀನುಗಾರಿಕಾ ಬಂದರು ಸೇರಿದಂತೆ ಪ್ರಮುಖ ಸ್ಥಳಗಳನ್ನು ಕಾರ್ಯಾಚರಣೆಗೆ ಪರಿಗಣಿಸಲಾಗಿದೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾರ್ಯಾಚರಣೆಯನ್ನು ಮುನ್ನಡೆಸಲು ಸ್ಥಳೀಯ ಮಟ್ಟದಲ್ಲಿ ಘಟನೆ ನಿರ್ವಹಣಾಧಿಕಾರಿಯನ್ನು ನಿಯೋಜಿಸಲಾಗುವುದು. ವಿವಿಧ ಇಲಾಖೆಗಳ ಕಾರ್ಯಾಚರಣೆಯನ್ನು ಸಮನ್ವಯಗೊಳಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗುತ್ತದೆ.
ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರದ ಮೂಲಕ ಮಾಹಿತಿ ಸಂಗ್ರಹಣೆ, ರವಾನೆ ಹಾಗೂ ಅಣಕು ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಲಾಗುತ್ತದೆ.
ಇಲಾಖೆಗಳ ಸಿದ್ಧತೆ ಪರಿಶೀಲನೆ
ಅಣಕು ಕಾರ್ಯಾಚರಣೆಯ ಮೂಲಕ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ವಿವಿಧ ಇಲಾಖೆಗಳು ಎಷ್ಟು ತ್ವರಿತವಾಗಿ ಸ್ಪಂದಿಸುತ್ತವೆ, ಪರಸ್ಪರ ಸಮನ್ವಯ ಹೇಗಿರುತ್ತದೆ, ತುರ್ತು ಸೇವೆಗಳು ಎಷ್ಟು ಸುಲಭವಾಗಿ ಲಭ್ಯವಾಗುತ್ತವೆ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ಸಿದ್ಧತೆಗಳಿವೆಯೇ ಎಂಬುದನ್ನು ಪರಿಶೀಲಿಸಲಾಗುವುದು.
ಇದು ನೈಜ ಚಂಡಮಾರುತ ಅಥವಾ ವಿಪತ್ತು ಪರಿಸ್ಥಿತಿಯಲ್ಲ. ಸಾರ್ವಜನಿಕರಿಗೆ ಯಾವುದೇ ಆತಂಕ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ ಅಣಕು ಕಾರ್ಯಾಚರಣೆ ನಡೆಸಲಾಗುವುದು. ಆದ್ದರಿಂದ ಸಾರ್ವಜನಿಕರು ಇದನ್ನು ನೈಜ ವಿಪತ್ತು ಎಂದು ಭಾವಿಸಿ ಆತಂಕಕ್ಕೊಳಗಾಗದೆ, ಅಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad




