ಮಂಗಳೂರು: ಸೆ.18 ರಂದು ಮಂಗಳೂರಿನಲ್ಲಿ ನಡೆವ ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಆಗಿದ್ದು, ಇದನ್ನು ಎಲ್ಲರೂ ಸ್ವಾಗತಿಸುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ, ಕರಾವಳಿ ಸಂಪರ್ಕ, ಆರ್ಥಿಕ ಪ್ರಗತಿ ಹಾಗೂ ಪ್ರವಾಸೋದ್ಯಮಕ್ಕೆ ವೇಗ ನೀಡುವಂತೆ 15 ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಡೇರಿಸುವ ಭರವಸೆ ಇದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ರಾಜ್ಯ ಮೆರಿಟೈಮ್ ಮಂಡಳಿ ಹಾಗೂ ವಿಶೇಷ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರಗಳಲ್ಲಿ ಕರಾವಳಿ ಭಾಗದ ಲೋಕಸಭಾ ಸಂಸದರಿಗೆ ಪ್ರಾತಿನಿಧ್ಯ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಮಂಗಳೂರು–ಬೆಂಗಳೂರು ಸಂಪರ್ಕ ಕಾರಿಡಾರ್ ಹಾಗೂ ಶಿರಾಡಿಘಾಟ್ ಮಾರನಹಳ್ಳಿ–ಅಡ್ಡಹೊಳೆ ರಸ್ತೆ ಅಭಿವೃದ್ಧಿಯನ್ನು ತ್ವರಿತಗೊಳಿಸುವುದು, ಮಂಗಳೂರು–ಬೆಂಗಳೂರು ರೈಲು ಮಾರ್ಗ ದ್ವಿಪಥ ಕಾಮಗಾರಿಯನ್ನು ಪೂರ್ಣಗೊಳಿಸುವುದು ಹಾಗೂ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಕೇಂದ್ರದೊಂದಿಗೆ ಮಾತುಕತೆ ನಡೆಸುವಂತೆ ಮನವಿ ಮಾಡಿದರು.
ಮಂಗಳೂರು–ಉಡುಪಿ ಕ್ಷಿಪ್ರ ಸಾರಿಗೆ ಕಾರಿಡಾರ್ ಯೋಜನೆ ಕುರಿತು ಕಾರ್ಯಸಾಧ್ಯತಾ ಅಧ್ಯಯನ ಆರಂಭಿಸುವುದು, ಮಂಗಳೂರು–ಉಡುಪಿ–ಕುಂದಾಪುರ ನಡುವೆ ಫೆರ್ರಿ ಸೇವೆ ಮತ್ತು ಜೆಟ್ಟಿ ಅಭಿವೃದ್ಧಿ, ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವುದು ಹಾಗೂ ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದ ಅರಣ್ಯ–ಕಂದಾಯ ಭೂಮಿ ಗಡಿ ಗೊಂದಲ ನಿವಾರಣೆಗೆ ವಿಶೇಷ ಕಾರ್ಯಪಡೆ ರಚಿಸುವ ಬೇಡಿಕೆಯನ್ನೂ ಮುಂದಿಡಲಾಗಿದೆ ಎಂದರು.
ಮಂಗಳೂರಿನಲ್ಲಿ ಕರಾವಳಿ ತಂತ್ರಜ್ಞಾನ ಮತ್ತು ನವೋದ್ಯಮ ಕೇಂದ್ರ ಸ್ಥಾಪನೆ, ಮೀನುಗಾರಿಕೆ, ಸಾಗರ ವಿಜ್ಞಾನ ಹಾಗೂ ನೀಲಿ ಆರ್ಥಿಕತೆಗಾಗಿ ಕೇಂದ್ರ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಲಾಗಿದೆ ಎಂದರು.
ಹಳದಿ ರೋಗ ಮತ್ತು ಎಲೆಚುಕ್ಕೆ ರೋಗದಿಂದ ಹಾನಿಗೊಳಗಾದ ಅಡಿಕೆ ಬೆಳೆಗಾರರಿಗೆ ವಿಶೇಷ ಪರಿಹಾರ ಪ್ಯಾಕೇಜ್ ನೀಡಬೇಕು. ಕರಾವಳಿ, ವೈದ್ಯಕೀಯ ಹಾಗೂ ಸಮ್ಮೇಳನ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಕ್ರೂಸ್ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ ಮತ್ತು ವಿಶ್ವದರ್ಜೆಯ ಸಮ್ಮೇಳನ–ಪ್ರದರ್ಶನ ಕೇಂದ್ರಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ ಎಂದು ತಿಳಿಸಿದರು.
ತುಳುನಾಡಿನ ಪರಂಪರೆ, ದೇವಾಲಯಗಳು, ಆಹಾರ, ನೈಸರ್ಗಿಕ ಸೌಂದರ್ಯ ಹಾಗೂ ಸಾಂಸ್ಕೃತಿಕ ವೈಭವವನ್ನು ಆಧರಿಸಿದ ಸ್ವತಂತ್ರ ಪ್ರವಾಸೋದ್ಯಮ ಮಾದರಿ ರೂಪಿಸುವುದರ ಜತೆಗೆ ಸ್ವಚ್ಛತೆ, ಸಾರ್ವಜನಿಕ ಸ್ಥಳಗಳು, ಪಾದಚಾರಿ ಸೌಲಭ್ಯ ಹಾಗೂ ಪ್ರವಾಸಿ ಮೂಲಸೌಕರ್ಯ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಕುಂಪಲ್, ಪ್ರೇಮನಾಥ ಶೆಟ್ಟಿ, ಕವಿತಾ ಸನಿಲ್, ವಸಂತ ಪೂಜಾರಿ ಸೇರಿದಂತೆ ಹಲವರು ಇದ್ದರು.
What do you feel about this post?
Like
Love
Happy
Haha
Sad





