ಮಂಗಳೂರು: ಕರಾವಳಿ–ಮಲೆನಾಡಿನ ದಶಕಗಳ ಬೇಡಿಕೆಗಳಿಗೆ ಸ್ಪಂದಿಸುವುದರ ಜೊತೆಗೆ, ಈ ಭಾಗದ ಮಾನವ ಸಂಪತ್ತು ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರ್ಕಾರ ಹೊಸ ಅಭಿವೃದ್ಧಿಯ ರೂಪುರೇಷೆ ಸಿದ್ಧಪಡಿಸುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗವು 340 ಕಿ.ಮೀ ಉದ್ದದ ತೀರವನ್ನು ಹೊಂದಿದೆ. ಈ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿಗೆ ಹೊಸ ದಿಕ್ಕು ನೀಡಬೇಕಿದೆ. ಕರಾವಳಿ ಹಾಗೂ ಮಲೆನಾಡಿನಿಂದ ಜನರು ವಲಸೆ ಹೋಗದಂತೆ ಸ್ಥಳೀಯವಾಗಿಯೇ ಉದ್ಯೋಗ ಮತ್ತು ಅಭಿವೃದ್ಧಿಯ ಅವಕಾಶಗಳನ್ನು ಸೃಷ್ಟಿಸಬೇಕು ಎಂದರು.
ಕರ್ನಾಟಕದಲ್ಲಿಯೇ ಕರಾವಳಿ–ಮಲೆನಾಡು ಭಾಗದಲ್ಲಿ ಹೆಚ್ಚು ವಿದ್ಯಾವಂತರು, ಪ್ರಜ್ಞಾವಂತರು ಹಾಗೂ ಪ್ರತಿಭಾವಂತ ಮಾನವ ಸಂಪನ್ಮೂಲವಿದೆ. ಈ ಮಾನವ ಸಂಪತ್ತಿಗೆ ಸ್ಥಳೀಯವಾಗಿಯೇ ಅವಕಾಶ ಕಲ್ಪಿಸಿ, ಅವರ ಸಾಮರ್ಥ್ಯವನ್ನು ಬಳಸಿಕೊಳ್ಳುವ ಅಗತ್ಯವಿದೆ. ಈ ನಾಡು ಯಾವುದಕ್ಕೂ ಕಡಿಮೆಯಿಲ್ಲ ಎಂದು ಹೇಳಿದರು.
ಕರಾವಳಿ ಭಾಗದ ಜನರು ಕಳೆದ 30–40 ವರ್ಷಗಳಿಂದ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಜನಪ್ರತಿನಿಧಿಗಳು ಮಾತ್ರವಲ್ಲದೆ ಬಿಜೆಪಿ ಶಾಸಕರು ಮತ್ತು ಸಂಸದರೂ ಹಲವು ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಈ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡಿದ್ದು, ಶುಕ್ರವಾರ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಸಭೆಯ ಬಳಿಕ ಸರ್ಕಾರ ಕೈಗೊಳ್ಳುವ ತೀರ್ಮಾನಗಳನ್ನು ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಕಸ್ತೂರಿರಂಗನ್ ವರದಿ ಜಾರಿ ವಿಚಾರದಲ್ಲಿ ರೈತರು ಹಾಗೂ ಕರಾವಳಿ–ಮಲೆನಾಡಿನ ಜನರಿಗೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ವರದಿಯನ್ನು ತಿರಸ್ಕರಿಸುವ ನಿಲುವನ್ನು ಸರ್ಕಾರ ಈಗಾಗಲೇ ಹೊಂದಿದೆ. ಆದರೆ ಈ ವಿಚಾರದಲ್ಲಿ ವಿವಿಧ ಒತ್ತಡಗಳು ಹಾಗೂ ಅಭಿಪ್ರಾಯಗಳಿವೆ ಎಂದರು.
ಈ ಹಿನ್ನೆಲೆಯಲ್ಲಿ ನಡೆಯುವ ವಿಶೇಷ ವಿಧಾನಸಭೆ ಅಧಿವೇಶನದಲ್ಲಿ ಎಲ್ಲ ಶಾಸಕರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಾಗುವುದು. ಅಧಿವೇಶನಕ್ಕೂ ಮುನ್ನ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಸ್ಥಳೀಯ ವಾಸ್ತವಾಂಶ ಅರಿಯುತ್ತಿರುವುದಾಗಿ ಎಂದರು.
‘ಅಧಿವೇಶನದಲ್ಲಿ ಚರ್ಚಿಸುವ ಮೊದಲು, ಯಾವುದೇ ಅಂತಿಮ ಅಭಿಪ್ರಾಯಕ್ಕೆ ಬರುವ ಮುನ್ನ ವಾಸ್ತವಾಂಶ ತಿಳಿದುಕೊಳ್ಳಬೇಕು. ಸಾಮಾನ್ಯ ರೈತರು, ಸ್ಥಳೀಯ ಜನರು, ಜನಪ್ರತಿನಿಧಿಗಳು ಹಾಗೂ ಹೋರಾಟಗಾರರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದೇನೆ’ ಎಂದರು.
ಬರ, ರೈತರ ಸಮಸ್ಯೆಗಳೂ ಚರ್ಚೆ
ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಮಾತ್ರವಲ್ಲದೆ, ರೈತರ ಸಮಸ್ಯೆಗಳು ಹಾಗೂ ಬರ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಲಾಗುವುದು. ರೈತರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಸಮಸ್ಯೆಗಳನ್ನು ಅರಿತುಕೊಂಡು ಚರ್ಚಿಸಲು ಅಧಿವೇಶನ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಉಮರ್ ಖಾಲೀದ್ ವಿಚಾರವಾಗಿ ಬಿ.ಕೆ.ಹರಿಪ್ರಸಾದ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಿ.ಕೆ.ಹರಿಪ್ರಸಾದ್ ಅವರೊಂದಿಗೆ ಮಾತನಾಡುತ್ತೇನೆ’ ಎಂದರು.
What do you feel about this post?
Like
Love
Happy
Haha
Sad





