ಕರಾವಳಿಯಲ್ಲಿ ಜೂಜಿನ ಕ್ಯಾಸಿನೊ ಇಲ್ಲ,ಕೇರಳ ಮಾದರಿ ಹೌಸ್‌ಬೋಟ್‌ ಪರಿಚಯಿಸುವ ಚಿಂತನೆ: ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ರಾಜ್ಯದ ಕರಾವಳಿ ಪ್ರದೇಶದ ಪ್ರವಾಸೋದ್ಯಮವನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ವಿವಿಧ ಪ್ರಸ್ತಾವನೆಗಳನ್ನು ಪರಿಶೀಲಿಸಲಾಗುತ್ತಿದೆ. ಮಂಗಳೂರಿನಿಂದ ಗೋವಾಕ್ಕೆ ಕರಾವಳಿ ಮಾರ್ಗವಾಗಿ ಕ್ರೂಸ್ ಸೇವೆ ಆರಂಭಿಸುವುದು, ಕೇರಳ ಮಾದರಿ ಹೌಸ್‌ಬೋಟ್‌ಗಳನ್ನು ಪರಿಚಯಿಸುವುದು ಸೇರಿದಂತೆ ಹಲವು ಯೋಜನೆಗಳ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ.ಗೋವಾ ಮಾದರಿಯಲ್ಲಿ ಕರ್ನಾಟಕದ ಕರಾವಳಿಯಲ್ಲಿ ಕ್ಯಾಸಿನೊ ಆರಂಭಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಪ್ರವಾಸೋದ್ಯಮ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ನಗರದ ತಣ್ಣೀರುಬಾವಿ ಬ್ಲೂ ಫ್ಲ್ಯಾಗ್ ಕಡಲತೀರಕ್ಕೆ ಭಾನುವಾರ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು, ಕರಾವಳಿ ಜಲ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆಕರ್ಷಣೆ ಇದೆ. ಇದನ್ನು ಉತ್ತೇಜಿಸಲು ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಮಂಗಳೂರಿನಿಂದ ಗೋವಾಕ್ಕೆ ಕ್ರೂಸ್ ಸೇವೆ ಆರಂಭಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಕರಾವಳಿಯ ವಿವಿಧ ಪ್ರವಾಸಿ ತಾಣಗಳಲ್ಲಿ ನಿಲುಗಡೆ ಕಲ್ಪಿಸಿ ಸೇವೆ ನಡೆಸುವ ಕುರಿತು ಚಿಂತನೆ ನಡೆದಿದೆ. ಸ್ಥಳೀಯ ಹಡಗು ನಿರ್ಮಾಣ ಘಟಕಗಳಲ್ಲಿ ನಿರ್ಮಾಣವಾಗುತ್ತಿರುವ ಹಡಗುಗಳನ್ನು ಈ ಸೇವೆಗೆ ಬಳಸಿಕೊಳ್ಳುವ ಸಾಧ್ಯತೆಯೂ ಇದೆ ಎಂದರು.

ನವ ಮಂಗಳೂರು ಬಂದರಿಗೆ ಆಗಮಿಸುವ ಅಂತರರಾಷ್ಟ್ರೀಯ ಕ್ರೂಸ್ ಪ್ರವಾಸಿಗರು ಇಲ್ಲಿಂದಲೇ ಮರಳದೆ, ಕರಾವಳಿ ಭಾಗದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇಲ್ಲಿಯೇ ಉಳಿಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕುರಿತು ಕೇಂದ್ರ ಬಂದರು, ಹಡಗು ಹಾಗೂ ಜಲಮಾರ್ಗ ಸಚಿವಾಲಯ ಮತ್ತು ನ್ಯೂ ಮಂಗಳೂರು ಬಂದರು ಪ್ರಾಧಿಕಾರದೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದರು.

ಕೇರಳ ಮಾದರಿಯ ಹೌಸ್‌ಬೋಟ್‌ಗಳನ್ನು ಪರಿಚಯಿಸುವ ಸಾಧ್ಯತೆಯ ಬಗ್ಗೆಯೂ ಪ್ರವಾಸೋದ್ಯಮ ಇಲಾಖೆ ಅಧ್ಯಯನ ನಡೆಸುತ್ತಿದೆ. ಕ್ರೂಸ್‌ಗೆ ಸಂಬಂಧಿಸಿದ ಎಲ್ಲ ಪ್ರಸ್ತಾವನೆಗಳು ಸದ್ಯ ಆರಂಭಿಕ ಹಂತದಲ್ಲಿವೆ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಪ್ರಸ್ತಾವನೆಗಳನ್ನು ಪರಿಶೀಲಿಸಿದ್ದಾರೆ. ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಈಗಾಗಲೇ ವಿವರವಾಗಿ ಚರ್ಚಿಸಿದ್ದೇನೆ. ಈ ಭಾಗದ ಪ್ರವಾಸೋದ್ಯಮ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದರು.

ರಾಜ್ಯದ ಇನ್ನಷ್ಟು ಬ್ಲೂ ಫ್ಲ್ಯಾಗ್ ಕಡಲತೀರಗಳನ್ನು  ಪ್ರಮಾಣೀಕರಣಕ್ಕೆ ಒಳಪಡಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಕಡಲತೀರಗಳ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಗುಣಮಟ್ಟದ ಆಹಾರ ಮಳಿಗೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ತಣ್ಣೀರುಬಾವಿ ನೀಲಿ ಧ್ವಜ ಕಡಲತೀರದಲ್ಲಿ ಸಾರ್ವಜನಿಕರ ಭೇಟಿ ಸಮಯವನ್ನು ವಿಸ್ತರಿಸುವ ಪ್ರಸ್ತಾವವನ್ನೂ ಪರಿಶೀಲಿಸಲಾಗುವುದು ಎಂದರು.

“ಪ್ರವಾಸೋದ್ಯಮ ಅಭಿವೃದ್ಧಿಯ ಉದ್ದೇಶ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಸ್ಥಳೀಯ ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವುದು” ಎಂದರು.

ಕರಾವಳಿ ನಿಯಂತ್ರಣ ವಲಯದ ನಿರ್ಬಂಧಗಳಿಂದಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ತಣ್ಣೀರುಬಾವಿ ಕಡಲತೀರದಲ್ಲಿ ಆದಾಯ ಹಂಚಿಕೆ ವಿವಾದದಿಂದಾಗಿ ಮುಚ್ಚಿರುವ ಆಹಾರ ಮಳಿಗೆಗಳನ್ನು ಶೀಘ್ರ ಪುನರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯ ಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ, ಕೊಡು-ಕೊಳ್ಳುವಿಕೆಯ ಮನೋಭಾವದಿಂದ ಸಮಸ್ಯೆ ಬಗೆಹರಿಸಬೇಕು ಎಂದು ನಿರ್ದೇಶಿಸಿದರು.

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ವಿ. ರಾಮ್ ಪ್ರಸಾದ್ ಮನೋಹರ್ ಸೇರಿದಂತೆ ಅಧಿಕಾರಿಗಳು ಇದ್ದರು.

ಹೋಂಸ್ಟೇಗಳಿಗೆ ಆರು ಕೊಠಡಿ ಅವಕಾಶ

ನೈಜ ಹೋಂಸ್ಟೇಗಳಲ್ಲಿ ಪ್ರವಾಸಿಗರಿಗೆ ಗರಿಷ್ಠ ಆರು ಕೊಠಡಿಗಳನ್ನು ಒದಗಿಸಲು ಅವಕಾಶ ನೀಡಲಾಗುವುದು. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಸತಿ ಅಥವಾ ಹೋಟೆಲ್‌ ರೀತಿಯ ಸೇವೆ ನಡೆಸುವವರು ಕಡ್ಡಾಯವಾಗಿ ಹೋಟೆಲ್ ಪರವಾನಗಿ ಪಡೆಯಬೇಕು ಎಂದರು.

ಪ್ರದೇಶದಲ್ಲಿ ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಅಗತ್ಯ ಮೂಲಸೌಕರ್ಯ ನೆರವು ಒದಗಿಸಲಾಗುವುದು ಎಂದರು.

Leave a Reply

Your email address will not be published. Required fields are marked *