ಮಂಗಳೂರು: ಕರಾವಳಿ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಹೊಸ ವೇಗ ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ ನಡೆವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿಯ ಹಲವು ಪ್ರಮುಖ ಯೋಜನೆಗಳ ಕುರಿತು ಚರ್ಚೆ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರಾವಳಿ ಅಭಿವೃದ್ಧಿಯ ದೃಷ್ಟಿಕೋನದಿಂದ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು ಎಂಬುದು ಬಹುದಿನಗಳ ಕನಸಾಗಿತ್ತು. ಇದೀಗ ಅದು ಸಾಕಾರಗೊಳ್ಳುತ್ತಿದೆ.ಕಡಲ ತಡಿಯಲ್ಲಿ ಸಂಪುಟ ಸಭೆ ನಡೆಯುತ್ತಿರುವುದರಿಂದ ಕರಾವಳಿಯ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುವ ನಿರೀಕ್ಷೆಯಿದೆ ಎಂದರು.
ಸಚಿವ ಸಂಪುಟ ಸಭೆಯಿಂದ ಜಿಲ್ಲೆಯ ಅಧಿಕಾರಿಗಳು ಹಾಗೂ ಸರ್ಕಾರದ ನಡುವಿನ ಅಂತರ ಕಡಿಮೆಯಾಗಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆಯಲಿದೆ. ಅಭಿವೃದ್ಧಿ ವಿಚಾರದಲ್ಲಿ ಕರಾವಳಿಯ ಶಾಸಕರು, ಸಂಸದರು ಹಾಗೂ ಅಧಿಕಾರಿಗಳು ಪಕ್ಷಭೇದ ಮರೆತು ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂಬ ಸಂದೇಶಕ್ಕೂ ಈ ಸಭೆ ಸಾಕ್ಷಿಯಾಗಲಿದೆ ಎಂದರು.
ಯುವಜನರಿಗೆ ಉದ್ಯೋಗ ಸೃಷ್ಟಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಮುಖ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ 100ರಿಂದ 150 ಎಕರೆ ಜಾಗ ಗುರುತಿಸಿ ತಾರಾ ಹೋಟೆಲ್ ನಿರ್ಮಾಣ, ಸಮಾವೇಶ ಕೇಂದ್ರ ಅಭಿವೃದ್ಧಿ, ತಲಪಾಡಿಯಿಂದ ಬೈಂದೂರುವರೆಗೆ ಕರಾವಳಿ ಸಂಪರ್ಕ ಮಾರ್ಗ ಅಭಿವೃದ್ಧಿ, ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಹಾಗೂ ಉಡುಪಿಯ ಬೆಳಪುದಲ್ಲಿ ಅರ್ಧಕ್ಕೆ ನಿಂತಿರುವ ಯೋಜನೆ ಪುನರಾರಂಭಕ್ಕೆ ಒತ್ತು ನೀಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ಮೀನುಗಾರಿಕಾ ಕಾಲೇಜು ಅಭಿವೃದ್ಧಿ, ಉಡುಪಿ ಅಜ್ಜರಕಾಡು ಪ್ರದೇಶವನ್ನು 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು, ಮಂಗಳಾ ಕ್ರೀಡಾಂಗಣ ಮತ್ತು ಪಿಲಿಕುಳ ಅಭಿವೃದ್ಧಿ, ವಿವಿಧ ತಾಲ್ಲೂಕುಗಳಲ್ಲಿ ಕ್ರೀಡಾಂಗಣ ನಿರ್ಮಾಣ, ವಿದ್ಯಾರ್ಥಿಗಳಿಗಾಗಿ ಕೌಶಲಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ ಎಂದು ತಿಳಿಸಿದರು.
ಕರಾವಳಿಯ ದೇವಾಲಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು. ಯಕ್ಷಗಾನ, ಕಂಬಳ ಸೇರಿದಂತೆ ಕರಾವಳಿಯ ವಿವಿಧ ಪರಂಪರೆಯ ಕಲೆಗಳ ಸಂರಕ್ಷಣೆ ಮತ್ತು ಉತ್ತೇಜನಕ್ಕೆ ಕನಿಷ್ಠ ₹10 ಕೋಟಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಲಾಗಿದೆ ಎಂದರು.
ಕೊಣಾಜೆಯಿಂದ ಮಣಿಪಾಲದವರೆಗೆ ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ. ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಘಾಟ್ ರಸ್ತೆಗಳ ಅಭಿವೃದ್ಧಿ ಹಾಗೂ ಸುರಂಗ ರಸ್ತೆ ನಿರ್ಮಾಣದ ಬಗ್ಗೆಯೂ ಈಗಾಗಲೇ ಚರ್ಚಿಸಲಾಗಿದೆ. ಈ ಎಲ್ಲ ಪ್ರಮುಖ ಯೋಜನೆಗಳ ಕುರಿತು ಸೆ.18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಭಂಡಾರಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ಮಾಜಿ ಅಧ್ಯಕ್ಷ ಹರೀಶ್ ಕುಮಾರ್, ಸುರೇಂದ್ರ ಕಂಬಳಿ, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಲಾರೆನ್ಸ್, ಶುಭೋದಯ ಆಳ್ವ ಇದ್ದರು.
What do you feel about this post?
Like
Love
Happy
Haha
Sad





