ಮಂಗಳೂರು: ಮೂಲ್ಕಿಯ ಬಪ್ಪನಾಡು ದೇವಸ್ಥಾನದ ಪ್ರವೇಶದ್ವಾರದ ಸಮೀಪವಿದ್ದ ಸಮಾಜ ಸೇವಕ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಹಿರಿಯ ವ್ಯಕ್ತಿತ್ವ ಸುಂದರರಾಮ್ ಶೆಟ್ಟಿ ಅವರ ಸಮಾಧಿಯನ್ನು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯ ವೇಳೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ತೆರವುಗೊಳಿಸಿರುವುದನ್ನು ಖಂಡಿಸಲಾಗುತ್ತದೆ ಎಂದು ಅಭಿಮಾನಿ ಬಳಗದ ಪರ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.
ಸಮಾಧಿ ತೆರವುಗೊಳಿಸುವ ಮುನ್ನ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಸ್ಥಳೀಯರೊಂದಿಗೆ ಯಾವುದೇ ಸಮಾಲೋಚನೆ ನಡೆಸದಿರುವುದು ಬೇಸರದ ಸಂಗತಿ. ಸುಂದರರಾಮ್ ಶೆಟ್ಟಿ ಅವರು ಕೇವಲ ಬ್ಯಾಂಕರ್ ಆಗಿರದೆ, ಕರಾವಳಿ ಭಾಗದ ಸಾವಿರಾರು ಕುಟುಂಬಗಳ ಬದುಕಿಗೆ ದಿಕ್ಕು ತೋರಿದ ಸಮಾಜ ನಿರ್ಮಾತೃ, ಶಿಕ್ಷಣ ಪ್ರೇಮಿ ಹಾಗೂ ಉದ್ಯೋಗದಾತರಾಗಿದ್ದರು. ಹೀಗಾಗಿ ಅವರ ಸ್ಮಾರಕವನ್ನು ಸಂರಕ್ಷಿಸುವುದು ಸರ್ಕಾರದ ನೈತಿಕ ಹೊಣೆಗಾರಿಕೆ ಆಗಿದೆ ಎಂದರು.
ಮೂಲ್ಕಿ ಅಥವಾ ಬಪ್ಪನಾಡು ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಎಕರೆ ಜಾಗವನ್ನು ಗುರುತಿಸಿ, ಅಲ್ಲಿ ಸಮಾಧಿಯನ್ನು ಮರುಸ್ಥಾಪಿಸಬೇಕು. ಜೊತೆಗೆ ಯುವಜನರಿಗೆ ಬ್ಯಾಂಕಿಂಗ್, ಐಎಎಸ್, ಕೆಎಎಸ್, ಐಪಿಎಸ್ ಹಾಗೂ ನ್ಯಾಯಾಂಗ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಮೂಲಕ ಅವರ ಸೇವೆಯನ್ನು ಶಾಶ್ವತಗೊಳಿಸಬೇಕು ಎಂದರು.
ಈ ಕುರಿತು ಜಿಲ್ಲಾಧಿಕಾರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಬೇಡಿಕೆ ಈಡೇರದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನವೀನ್ ರೈ, ಬಾಲಕೃಷ್ಣ ರೈ ಹಾಗೂ ಸುಧಾಕರ ಶೆಟ್ಟಿ ಇದ್ದರು.
What do you feel about this post?
Like
Love
Happy
Haha
Sad
