ಮಂಗಳೂರು: ಇದೇ 28 ಮತ್ತು 29 ರಂದು ಬೋಳೂರಿನ ಅಮೃತ ವಿದ್ಯಾಲಯಂ ಶಾಲಾ ಮೈದಾನದಲ್ಲಿ ಅಮೃತಸಂಗಮ 2026 ಮತ್ತು 25 ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಸಕಲ ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಮಾತಾ ಅಮೃತಾನಂದಮಯಿ ದೇವಿ (ಅಮ್ಮ) 7 ವರ್ಷಗಳ ನಂತರ ಕರಾವಳಿ ನಗರಿ ಮಂಗಳೂರಿಗೆ ಭಕ್ತರಿಗೆ ದರ್ಶನ ನೀಡುವುದಕ್ಕೆ ಬರುತ್ತಿರುವುದು ಭಕ್ತರ ಸಂಭ್ರಮಕ್ಕೆ ಕಾರಣವಾಗಿದೆ. ಸುಮಾರು 50 ರಿಂದ 75 ಸಾವಿರ ಮಂದಿ ಭಕ್ತರು ಸೇರುವ ನಿರೀಕ್ಷೆ ಇದೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಅಮೀನ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬಾರಿ ಕೇರಳದ ಹೊರಗಡೆ ಅಮ್ಮನವರು ಭೇಟಿ ನೀಡುತ್ತಿರುವ ಕರ್ನಾಟಕದ ಏಕೈಕ ಸ್ಥಳ ಮಂಗಳೂರು ಆಗಿದ್ದು, ಕರಾವಳಿಯ ಭಕ್ತರಲ್ಲಿ ವಿಶೇಷ ಉತ್ಸಾಹ ಮೂಡಿದೆ. ದೇಶ ವಿದೇಶದಿಂದ ಸುಮಾರು 200 ರಿಂದ 500 ಮಂದಿ ಬರುವ ನಿರೀಕ್ಷೆ ಇದೆ. ಬೃಹತ್ ಸೇವಾ ಯೋಜನೆಗಳ ಅನಾವರಣ ಮೇ 28 ರಂದು ಬೆಳಗ್ಗೆ 10.30 ಕ್ಕೆ ಅಮ್ಮನವರ ದಿವ್ಯ ಉಪಸ್ಥಿತಿಯಲ್ಲಿ ಸಮಾಜಮುಖಿ ಮಾನವೀಯ ಸೇವಾ ಯೋಜನೆಗಳ ಅನಾವರಣ ಹಾಗೂ ವಿತರಣೆ ನಡೆಯಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಕೇಂದ್ರ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಭಾಗವಹಿಸಲಿದ್ದಾರೆ. ಸ್ಪೀಕರ್ ಯು. ಟಿ. ಖಾದರ್ ಫರೀದ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಡಿ. ವೇದವ್ಯಾಸ ಕಾಮತ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸೇರಿದಂತೆ ಹಲವು ಪಾಲ್ಗೊಳ್ಳಲಿದ್ದಾರೆ ಎಂದರು.
ಎರಡೂ ದಿನಗಳ ಕಾಲ ಮಧ್ಯಾಹ್ನ ಮತ್ತು ರಾತ್ರಿ ವಿಶಾಲ ಅನ್ನಕ್ಷೇತ್ರದಲ್ಲಿ ಭಕ್ತರಿಗೆ ಮಹಾ ಅನ್ನಪ್ರಸಾದ ವಿನಿಯೋಗ ನಡೆಯಲಿದೆ. ಕುಡಿವ ನೀರು, ಮಜ್ಜಿಗೆ ಸೌಲಭ್ಯ ಕಲ್ಪಿಸಲಾಗಿದೆ. ಮುಂಚಿತವಾಗಿ ಕಾಯ್ದಿರಿಸಿದ ಪರವೂರಿನ ಭಕ್ತರಿಗೆ ವಸತಿ ವ್ಯವಸ್ಥೆ ಇದೆ. ಕಾರ್ಯಕ್ರಮದ ನಂತರ ಭಕ್ತರ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ ಸೇರಿದಂತೆ ವಿಶೇಷ ಬಸ್ ವ್ಯವಸ್ಥೆ ಇರಲಿದೆ ಎಂದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಪದಾಧಿಕಾರಿಗಳಾದ ಡಾ. ಜೀವರಾಜ್ ಸೊರಕೆ, ಸಿ ಎ ವಾಮನ್ ಕಾಮತ್, ಡಾ. ವಸಂತಕುಮಾರ ಪೆರ್ಲ, ಸಿ ಎ ರಾಮನಾಥ್ ಹಾಗೂ ಡಾ. ದೇವದಾಸ್ ಪುತ್ರನ್ ಇದ್ದರು.
ಪುಟ್ಟ ಮಕ್ಕಳಿಗೂ ಟೋಕನ್ ಕಡ್ಡಾಯ
ಬೋಳೂರಿನ ಯಜ್ಞಶಾಲೆ ಹಾಗೂ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಬೆಳಗ್ಗಿನಿಂದ ರಾತ್ರಿಯವರೆಗೆ ವೈವಿಧ್ಯಮಯ ಪೂಜಾ ವಿಧಿಗಳು ನಡೆಯಲಿವೆ. ಅಮ್ಮನ ದರ್ಶನಕ್ಕೆ ಯಾವುದೇ ಶುಲ್ಕ ಇಲ್ಲ. ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲರಿಗೂ ಮುಕ್ತ ಅವಕಾಶವಿದೆ. ಶಿಸ್ತುಬದ್ಧ ದರ್ಶನಕ್ಕಾಗಿ ಬೆಳಗ್ಗೆ 9.30 ರೊಳಗೆ ಆಗಮಿಸುವ ಭಕ್ತರಿಗೆ ‘ಟೈಮ್ ಕಾರ್ಡ್’ ನೀಡಲಾಗುತ್ತದೆ. ಆದ್ಯತೆಯ ಮೇರೆಗೆ ದರ್ಶನ ಟೋಕನ್ ವಿತರಿಸಲಾಗುವುದು, ಪುಟ್ಟ ಮಕ್ಕಳಿಗೂ ಟೋಕನ್ ಕಡ್ಡಾಯ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಅಮೀನ್ ತಿಳಿಸಿದರು.


