ಮಂಗಳೂರು: ನಗರದ ವಿವಿಧೆಡೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಕುರಿತು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು.
ಹಂಪನಕಟ್ಟೆಯ ರಾಜಾಜಿ ಪಾರ್ಕ್‌ಗೆ ಭೇಟಿ ನೀಡಿದ ಆಯುಕ್ತರು ಆಹಾರ ಮಳಿಗೆ ಪ್ರದೇಶ ಹಾಗೂ ಬಯಲು ರಂಗಮಂದಿರವನ್ನು ಪರಿಶೀಲಿಸಿದರು. ಬಯಲು ರಂಗಮಂದಿರದಲ್ಲಿ ಪ್ರತಿ ವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತೆ ಉತ್ತಮ ಗುಣಮಟ್ಟದ ಧ್ವನಿ ಹಾಗೂ ಬೆಳಕಿನ ವ್ಯವಸ್ಥೆ, ಸುಸಜ್ಜಿತ ವೇದಿಕೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಯಲು ರಂಗಮಂದಿರ ಹಾಗೂ ಸುತ್ತಮುತ್ತಲಿನ ಪ್ರದೇಶದ ನಿರ್ವಹಣೆಗೆ ಅಗತ್ಯವಿರುವ ಶುಲ್ಕ ನಿಗದಿಪಡಿಸುವ ಕುರಿತು ಪರಿಶೀಲನೆ ನಡೆಸುವಂತೆಯೂ ನಿರ್ದೇಶಿಸಿದರು.
ಉದ್ಯಾನ ಅಭಿವೃದ್ಧಿಗೆ ಒತ್ತು
ಪಾಂಡೇಶ್ವರದ ಸೌಹಾರ್ದ ಪಾರ್ಕ್‌ಗೆ ಭೇಟಿ ನೀಡಿದ ಆಯುಕ್ತರು ಉದ್ಯಾನವನದ ಪ್ರಸ್ತುತ ನಿರ್ವಹಣೆ ಹಾಗೂ ಅಭಿವೃದ್ಧಿ ಕುರಿತು ಪರಿಶೀಲಿಸಿದರು. ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುವಂತೆ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ಅಗತ್ಯ ಕ್ರಮಗಳ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮೇಲ್ಸೇತುವೆ ನಿರ್ಮಾಣದ ಸಾಧ್ಯತೆ ಪರಿಶೀಲನೆ
ಬಳಿಕ ಪಾಂಡೇಶ್ವರದ ಶ್ರೀನಿವಾಸ ವಿಶ್ವವಿದ್ಯಾಲಯದ ಸಮೀಪದ ರೈಲ್ವೆ ಕ್ರಾಸಿಂಗ್‌ಗೆ ಭಾರತೀಯ ರೈಲ್ವೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಆಯುಕ್ತರು, ಈ ಭಾಗದಲ್ಲಿ ಸಂಚಾರ ಸುಗಮಗೊಳಿಸಲು ರೈಲ್ವೆ ಮೇಲ್ಸೇತುವೆ ನಿರ್ಮಿಸುವ ಸಾಧ್ಯತೆ ಕುರಿತು ಪರಿಶೀಲನೆ ನಡೆಸಿದರು.
ರಸ್ತೆ ಎತ್ತರಿಸುವ ಯೋಜನೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಗೆ ಪತ್ರ ಬರೆಯಬೇಕು. ಈ ಕುರಿತು ಸಭೆ ಕರೆಯುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಸದರಿ ಸ್ಥಳದಲ್ಲಿ ಸುಮಾರು ₹2.10 ಕೋಟಿ ವೆಚ್ಚದಲ್ಲಿ ಸ್ವಯಂಚಾಲಿತ ಸಂಕೇತ ವ್ಯವಸ್ಥೆ ಅಳವಡಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಆಯುಕ್ತರಿಗೆ ಮಾಹಿತಿ ನೀಡಿದರು.
ಮಹಾಕಾಳಿಪಡ್ಪುವಿನಲ್ಲಿ ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಪೌರಕಾರ್ಮಿಕರ ವಸತಿ ಕಟ್ಟಡದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತರು ಪರಿಶೀಲನೆ ನಡೆಸಿದರು.
ವಸತಿ ಕಟ್ಟಡ ನಿರ್ಮಾಣವಾಗುತ್ತಿರುವ ಪ್ರದೇಶದಲ್ಲಿ ಸ್ಥಳಾವಕಾಶದ ಕೊರತೆಯಿಂದ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಗಮನಹರಿಸಬೇಕು. ಪೌರಕಾರ್ಮಿಕರಿಗೆ ಗುಣಮಟ್ಟದ ಮನೆಗಳನ್ನು ನಿರ್ಮಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಮೀಪದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಮೇಲ್ಛಾವಣಿ ಕುಸಿಯುತ್ತಿರುವ ಕುರಿತು ಪೌರಕಾರ್ಮಿಕ ಸಂಘದ ಪ್ರತಿನಿಧಿಗಳು ಆಯುಕ್ತರ ಗಮನಕ್ಕೆ ತಂದರು. ಈ ಬಗ್ಗೆ ಪರಿಶೀಲನೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕದ್ರಿ ಪಾರ್ಕ್ ಹಾಗೂ ಕಾರಂಜಿ ಪ್ರದೇಶಕ್ಕೆ ಭೇಟಿ ನೀಡಿದ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿದರು.
ಮಳೆಗಾಲ ಮುಗಿದ ಬಳಿಕ ಕಾರಂಜಿ ಪ್ರದೇಶವನ್ನು ಉತ್ತಮ ಗುಣಮಟ್ಟದ ಮೂಲಸೌಕರ್ಯಗಳೊಂದಿಗೆ ಪುನರ್ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ತಾಣವಾಗಿ ರೂಪಿಸುವ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಯೋಜನೆಗೆ ಸಂಬಂಧಿಸಿದಂತೆ ಸಮಗ್ರ ನೀಲನಕ್ಷೆ ಸಿದ್ಧಪಡಿಸಿ ಕರ್ನಾಟಕ ಪ್ರವಾಸೋದ್ಯಮ ಮಂಡಳಿ ಮುಂದೆ ಮಂಡಿಸುವಂತೆಯೂ ನಿರ್ದೇಶಿಸಿದರು.
ಪರಿಶೀಲನೆ ಸಂದರ್ಭದಲ್ಲಿ ಭಾರತೀಯ ರೈಲ್ವೆ ಅಧಿಕಾರಿಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಇದ್ದರು.
What do you feel about this post?
Like
Love
Happy
Haha
Sad





