ಡಿಕೆಶಿಯತ್ತ ವಾಲಿದ ಕಾಂಗ್ರೆಸ್ ಶಾಸಕರು? ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ರಾಜಕೀಯ ಲೆಕ್ಕಾಚಾರ ಜೋರು, ಖಾದರ್ ಗೆ ಡಿಸಿಎಂ ಸ್ಥಾನ ಸಾಧ್ಯತೆ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ದೇಶ ವಿದೇಶ ಪುತ್ತೂರು ಮಂಗಳೂರು ಮಹಾನಗರ ರಾಜಕೀಯ ರಾಜ್ಯ ಶಿರಸಿ

Spread the love

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ತೀವ್ರವಾಗುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು ವೇಗ ಪಡೆದುಕೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದ ಹಲವರು ಇದೀಗ ಡಿ.ಕೆ. ಶಿವಕುಮಾರ್ ಬಣದತ್ತ ಮುಖ ಮಾಡುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಜೋರಾಗಿವೆ.

ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಿದ್ದರಾಮಯ್ಯ ಪರವಾಗಿ ಕೆಲ ಹಿರಿಯ ಶಾಸಕರು ಹಾಗೂ ಸಚಿವರು ಮಾತ್ರ ಉಳಿದಿದ್ದು, ಡಿ.ಕೆ. ಶಿವಕುಮಾರ್ ಪರವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ಡಿಕೆ ಶಿವಕುಮಾರ್ ಪರವಾಗಿ ಒಲವು ತೋರಿರುವುದು ಹಾಗೂ ಮುಖ್ಯಮಂತ್ರಿ ಬದಲಾವಣೆಯೊಂದಿಗೆ ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಗಳು ಹೆಚ್ಚಿರುವುದು ಈ ಬದಲಾವಣೆಗೆ ಕಾರಣ ಎಂದು ಹೇಳಲಾಗುತ್ತಿದೆ. ಸಚಿವ ಸ್ಥಾನ ನಿರೀಕ್ಷೆಯಲ್ಲಿರುವ ಹಲವರು ಡಿಕೆಶಿ ಬಣ ಸೇರಿಕೊಳ್ಳುತ್ತಿದ್ದಾರೆ ಎಂಬ ಚರ್ಚೆ ಪಕ್ಷದೊಳಗೆ ಕೇಳಿ ಬರುತ್ತಿದೆ.

ಹೊಸಬರಿಗೆ ಹೆಚ್ಚು ಅವಕಾಶ?

ಡಿಕೆ ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಹೊಸಬರಿಗೆ ಹೆಚ್ಚಿನ ಅವಕಾಶ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಜತೆಗೆ ಮೂರು ಅಥವಾ ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿಸುವ ಪ್ರಸ್ತಾಪಕ್ಕೂ ಒಪ್ಪಿಗೆ ದೊರಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಡಿಸಿಎಂ ಹುದ್ದೆ  ಯಾರಿಗೆ? ಖಾದರ್ ಲಕ್ 

ಲಿಂಗಾಯತ ಸಮುದಾಯದ ಕೋಟಾದಲ್ಲಿ ಸಚಿವ ಎಂ.ಬಿ. ಪಾಟೀಲ್ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ದಲಿತ ಕೋಟಾದಲ್ಲಿ ಡಾ.ಜಿ. ಪರಮೇಶ್ವರ್ ಅಥವಾ ಎಚ್.ಸಿ. ಮಹದೇವಪ್ಪ ಅವರಿಗೆ ಅವಕಾಶ ಸಿಗಬಹುದು ಎನ್ನಲಾಗಿದೆ. ಅಲ್ಪಸಂಖ್ಯಾತರ ಕೋಟಾದಲ್ಲಿ ಜಮೀರ್ ಅಹ್ಮದ್ ಖಾನ್ ಹಾಗೂ ಯು. ಟಿ. ಖಾದರ್ ಹೆಸರುಗಳು ಚರ್ಚೆಯಲ್ಲಿವೆ.

ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಹುದ್ದೆಯ ಆಫರ್ ಇರುವ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದರೂ, ಸಚಿವ ಅನುಭವದ ಕೊರತೆಯಿಂದ ಆ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಆದರೆ, ಸಚಿವ ಸ್ಥಾನಕ್ಕೆ ಯತೀಂದ್ರ ಹೆಸರು ಗಂಭೀರ ಚರ್ಚೆಯಲ್ಲಿದೆ ಎಂಬ ಮಾಹಿತಿ ಪಕ್ಷದ ವಲಯದಿಂದ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *