ಪೊಲೀಸ್ ಹುತಾತ್ಮರ ತ್ಯಾಗ, ಸಮರ್ಪಣೆ ಸದಾ ಸ್ಮರಣೀಯ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಜಿಲ್ಲಾ ಸುದ್ದಿ ಕಾರವಾರ ರಾಜ್ಯ ಶಿರಸಿ

Spread the love

ಕಾರವಾರ: ಪೊಲೀಸ್ ಹುತಾತ್ಮರ ತ್ಯಾಗವನ್ನು ಸ್ಮರಿಸುವುದರ ಜತೆಗೆ, ಅವರ ಕುಟುಂಬಗಳ ನೆರವಿಗೂ ಸಮಾಜ ಮುಂದಾಗಬೇಕು. ಅಪಾಯಗಳ ನಡುವೆಯೂ ಜನರ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂದಿಯ ಧೈರ್ಯ, ಸಮರ್ಪಣೆ ಮತ್ತು ಕರ್ತವ್ಯನಿಷ್ಠೆ ಸದಾ ಗೌರವಾರ್ಹ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.

ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಜನರು ನೆಮ್ಮದಿಯಿಂದ ನಿದ್ರಿಸುವಾಗ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಹಬ್ಬ-ಹರಿದಿನಗಳಲ್ಲಿ ಜನಸಂದಣಿ ನಿಯಂತ್ರಿಸುವುದು, ಭದ್ರತೆ ಒದಗಿಸುವುದು ಮಾತ್ರವಲ್ಲದೆ, ಅಪಘಾತ, ಪ್ರಕೃತಿ ವಿಕೋಪ ಮತ್ತು ಕೋಮು ಉದ್ವಿಗ್ನತೆಯಂತಹ ತುರ್ತು ಸಂದರ್ಭಗಳಲ್ಲಿಯೂ ಜನರ ರಕ್ಷಣೆಗಾಗಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಾರೆ. ಇಂತಹ ಸಿಬ್ಬಂದಿಯ ಸೇವೆ ಮತ್ತು ತ್ಯಾಗವನ್ನು ಸಮಾಜ ಸದಾ ಗೌರವಿಸಬೇಕು ಎಂದರು.

ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯ ಸಮವಸ್ತ್ರದ ಹಿಂದೆ ಒಂದು ಕುಟುಂಬವಿರುತ್ತದೆ. ಕರ್ತವ್ಯದ ವೇಳೆ ಪೊಲೀಸ್ ಅಧಿಕಾರಿ ಮೃತಪಟ್ಟಾಗ ದೇಶ ತನ್ನ ರಕ್ಷಕನನ್ನು ಕಳೆದುಕೊಂಡರೆ, ಅವರ ಕುಟುಂಬ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತದೆ. ಹೀಗಾಗಿ, ಹುತಾತ್ಮರಿಗೆ ಸಲ್ಲಿಸುವ ಗೌರವವು ಪುಷ್ಪನಮನ ಮತ್ತು ಗೌರವ ವಂದನೆಗೆ ಸೀಮಿತವಾಗಬಾರದು. ಅವರ ಕುಟುಂಬಗಳನ್ನೂ ಸ್ಮರಿಸಿ, ಅಗತ್ಯ ನೆರವು ನೀಡಬೇಕು. ಅವರ ತ್ಯಾಗವನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.

ಸಾರ್ವಜನಿಕರ ಸಹಕಾರವೂ ಅಗತ್ಯ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಶ್ ಶಶಿ ಮಾತನಾಡಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಜವಾಬ್ದಾರಿ ಮಾತ್ರವಲ್ಲ, ಸಾರ್ವಜನಿಕರ ಸಹಕಾರವೂ ಅಗತ್ಯ. ಪ್ರತಿಯೊಬ್ಬರೂ ಕಾನೂನು ಪಾಲಿಸುವುದು, ಇತರರ ಹಕ್ಕುಗಳನ್ನು ಗೌರವಿಸುವುದು ಹಾಗೂ ಅಪರಾಧ ತಡೆಗೆ ಸಹಕರಿಸುವುದು ಮುಖ್ಯ ಎಂದರು.

ಪೊಲೀಸರು ದೀರ್ಘ ಕೆಲಸದ ಅವಧಿ, ಮಾನಸಿಕ ಒತ್ತಡ ಮತ್ತು ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುತ್ತಾರೆ. ಅವರಿಗೆ ಸೂಕ್ತ ತರಬೇತಿ, ಆಧುನಿಕ ಸಾಧನಗಳು, ಅಗತ್ಯ ಸಿಬ್ಬಂದಿ ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಬೆಂಬಲ ಒದಗಿಸಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ವಿವಿಧ ಕಾರ್ಯಾಚರಣೆಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಪ್ರಾಣತ್ಯಾಗ ಮಾಡಿದ ಪೊಲೀಸ್ ಸಿಬ್ಬಂದಿಯ ಹೆಸರುಗಳನ್ನು ವಾಚಿಸಿದರು. ಬಳಿಕ ಹುತಾತ್ಮರ ಗೌರವಾರ್ಥ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳ ಸಿಬ್ಬಂದಿ, ನಿವೃತ್ತ ಪೊಲೀಸ್ ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದು ಹುತಾತ್ಮರಿಗೆ ಗೌರವ ಸಲ್ಲಿಸಿದರು.

Leave a Reply

Your email address will not be published. Required fields are marked *