ಮಂಗಳೂರು: ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ತನ್ನ 119 ನೇ ಸಂಸ್ಥಾಪನಾ ದಿನವನ್ನು ಆಚರಿಸಿ, ಗ್ರಾಹಕರಿಗೆ ಇನ್ನಷ್ಟು ಸುಲಭ ಹಾಗೂ ಸುರಕ್ಷಿತ ಸೇವೆ ಒದಗಿಸುವ ಉದ್ದೇಶದಿಂದ ಹಲವು ಹೊಸ ಬ್ಯಾಂಕಿಂಗ್ ಯೋಜನೆಗಳನ್ನು ಪರಿಚಯಿಸಿದೆ.
ಈ ವರ್ಷದ ಧ್ಯೇಯವಾಕ್ಯ ‘ವಿಶ್ವಾಸದೊಂದಿಗೆ ಮುನ್ನಡೆ’ಆಗಿದ್ದು, ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ವಿಸ್ತರಿಸಲು ಬ್ಯಾಂಕ್ ಆದ್ಯತೆ ನೀಡಿದೆ.
ಸಂಸ್ಥಾಪನಾ ದಿನದ ಅಂಗವಾಗಿ ಬ್ಯಾಂಕಿನ ಜಾಗತಿಕ ರಾಯಭಾರಿ ಸಚಿನ್ ತೆಂಡೂಲ್ಕರ್ ಅವರು ಹೊಸ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಿದರು. ಈ ಸೇವೆಯ ಮೂಲಕ ಗ್ರಾಹಕರಿಗೆ ಹೆಚ್ಚು ಸುರಕ್ಷಿತ, ವೇಗದ ಹಾಗೂ ವೈಯಕ್ತಿಕ ಅಗತ್ಯಗಳಿಗೆ ತಕ್ಕ ಬ್ಯಾಂಕಿಂಗ್ ಸೌಲಭ್ಯ ದೊರೆಯಲಿದೆ.
ಇದರ ಜೊತೆಗೆ ತಂತ್ರಜ್ಞಾನ, ಸಂಶೋಧನೆ ಹಾಗೂ ನವೋದ್ಯಮಕ್ಕೆ ಉತ್ತೇಜನ ನೀಡುವ ಹೊಸ ಕೇಂದ್ರವನ್ನು ಆರಂಭಿಸಲಾಗಿದ್ದು, ಧ್ವನಿ ಆಧಾರಿತ ಬಹುಭಾಷಾ ಬ್ಯಾಂಕಿಂಗ್ ಸೇವೆಯನ್ನೂ ಪರಿಚಯಿಸಲಾಗಿದೆ.
ಹೊಸ ಗೃಹಸಾಲ ಯೋಜನೆ, ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರಗಳು ಹಾಗೂ ಬ್ಯಾಟರಿ ವಿನಿಮಯ ವ್ಯವಸ್ಥೆಗೆ ಹಣಕಾಸು ನೆರವು, ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ವಿಶೇಷ ಸಾಲ ಯೋಜನೆ ಸೇರಿದಂತೆ ಹಲವು ಹೊಸ ಉಪಕ್ರಮಗಳನ್ನು ಬ್ಯಾಂಕ್ ಜಾರಿಗೆ ತಂದಿದೆ.
ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಜನರಿಗೆ ಬ್ಯಾಂಕಿಂಗ್ ಸೇವೆ ತಲುಪಿಸುವ ಉದ್ದೇಶದಿಂದ ದೇಶಾದ್ಯಂತ 119 ಹೊಸ ಗ್ರಾಹಕ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ.
ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದೇವದತ್ತ ಚಂದ್ ಅವರು ಮಾತನಾಡಿ, ಗ್ರಾಹಕರ ವಿಶ್ವಾಸವೇ ಬ್ಯಾಂಕಿನ ಬೆಳವಣಿಗೆಯ ಪ್ರಮುಖ ಆಧಾರವಾಗಿದೆ. ನಾವೀನ್ಯತೆ, ಸುಸ್ಥಿರ ಅಭಿವೃದ್ಧಿ ಹಾಗೂ ಜವಾಬ್ದಾರಿಯುತ ಬ್ಯಾಂಕಿಂಗ್ ಮೂಲಕ ಜನಸ್ನೇಹಿ ಸೇವೆಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದರು.
What do you feel about this post?
Like
Love
Happy
Haha
Sad





