ಎಸ್‌ಐಆರ್‌, ಸೆಪ್ಟೆಂಬರ್ ಅಂತ್ಯದೊಳಗೆ ಮೊದಲ ನೋಟಿಸ್ ಪ್ರಕರಣಗಳ ವಿಚಾರಣೆ ಪೂರ್ಣ:ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಜಿಲ್ಲಾ ಸುದ್ದಿ ಕಾರವಾರ ಶಿರಸಿ

Spread the love

ಕಾರವಾರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌)-2026ರಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮ್ಯಾಪಿಂಗ್ ಆಗದಿರುವ ಹಾಗೂ ಮ್ಯಾಪಿಂಗ್‌ನಲ್ಲಿ ತಾರ್ಕಿಕ ವ್ಯತ್ಯಾಸ ಹೊಂದಿರುವ ಪ್ರಕರಣಗಳ ಮೊದಲ ನೋಟಿಸ್‌ಗಳ ವಿಚಾರಣೆಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು.

<

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮ್ಯಾಪಿಂಗ್ ಆಗದಿರುವ ಹಾಗೂ ತಾರ್ಕಿಕ ವ್ಯತ್ಯಾಸ ಹೊಂದಿರುವ ಒಟ್ಟು 65,248 ಪ್ರಕರಣಗಳಿವೆ. ಈ ಪೈಕಿ 64,749 ನೋಟಿಸ್‌ಗಳನ್ನು ಈಗಾಗಲೇ ವಿತರಿಸಲಾಗಿದೆ. 39,804 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, 24,945 ಪ್ರಕರಣಗಳು ಬಾಕಿ ಉಳಿದಿವೆ. ಇವುಗಳ ವಿಚಾರಣೆಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದರು.

ವಿಚಾರಣೆ ವೇಳೆ ಮರಣ ಹೊಂದಿರುವ ಅಥವಾ ದ್ವಿ-ನೋಂದಣಿ ಹೊಂದಿರುವ 85 ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದರು.

ಹಳಿಯಾಳ ಕ್ಷೇತ್ರದಲ್ಲಿ 14,012 ನೋಟಿಸ್‌ಗಳ ಪೈಕಿ 8,907 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ. ಕಾರವಾರದಲ್ಲಿ 10,446ರಲ್ಲಿ 5,881, ಕುಮಟಾದಲ್ಲಿ 8,344ರಲ್ಲಿ 4,984, ಭಟ್ಕಳದಲ್ಲಿ 13,660ರಲ್ಲಿ 6,889, ಶಿರಸಿಯಲ್ಲಿ 8,821ರಲ್ಲಿ 5,428 ಹಾಗೂ ಯಲ್ಲಾಪುರದಲ್ಲಿ 9,965 ನೋಟಿಸ್‌ಗಳ ಪೈಕಿ 7,715 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23 ಕೊನೆಯ ದಿನವಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸೆಪ್ಟೆಂಬರ್ 19 ಮತ್ತು 20ರಂದು ನಡೆದ ಮತದಾರರ ವಿಶೇಷ ಆಂದೋಲನದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗಾಗಿ 2,613 ಅರ್ಜಿಗಳು, ಆಕ್ಷೇಪಣೆಗಾಗಿ 89 ಹಾಗೂ ತಿದ್ದುಪಡಿಗಾಗಿ 1,395 ಅರ್ಜಿಗಳು ಸ್ವೀಕರಿಸಲಾಗಿದೆ ಎಂದರು.

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 23 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, 15,732 ಮತದಾರರು ನೋಂದಣಿಯಾಗಿದ್ದಾರೆ. ಹೊಸದಾಗಿ ಸೇರ್ಪಡೆಯಾಗಲು ಬಯಸುವವರು ನಮೂನೆ–18ರಲ್ಲಿ ಅರ್ಜಿಯನ್ನು ಜಿಲ್ಲೆಯ ತಹಶೀಲ್ದಾರ್ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಗೆ ಸಲ್ಲಿಸಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂಜಯ್ ಸಾಲುಂಕೆ, ಜೆಡಿಎಸ್ ಅಧ್ಯಕ್ಷ ಸೂರಜ್ ನಾಯ್ಕ ಸೋನಿ, ಕಾಂಗ್ರೆಸ್ ತಾಲೂಕು ಉಪಾಧ್ಯಕ್ಷ ಬಾಬು ಶೇಖ್, ಬ್ಲಾಕ್ ಅಧ್ಯಕ್ಷ ಅರವಿಂದ ಕಲಗುಟ್ಕರ್ ಹಾಗೂ ಚುನಾವಣಾ ಶಾಖೆಯ ತಹಶೀಲ್ದಾರ್ ಪ್ರಮೋದ್ ನಾಯ್ಕ ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

sanotsh