ಮಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಗಮನಾರ್ಹ ಸಾಧನೆ ಮಾಡಿರುವ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರಿಗೆ ರಾಜ್ಯ ಸರ್ಕಾರ ಸೂಕ್ತ ಗೌರವಧನ ಹಾಗೂ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ (ಜಾತ್ಯತೀತ) ಅಧ್ಯಕ್ಷ ಅಕ್ಷಿತ್ ಸುವರ್ಣ ಆಗ್ರಹಿಸಿದರು.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಸಂಜೆ ಆಗಮಿಸಿದ ಎಂ.ಆರ್. ಪೂವಮ್ಮ ಅವರನ್ನು ಅಕ್ಷಿತ್ ಸುವರ್ಣ ಆತ್ಮೀಯವಾಗಿ ಸ್ವಾಗತಿಸಿ, ಪುಷ್ಪಗುಚ್ಛ ನೀಡಿ ಗೌರವಿಸಿದರು. ಈ ಸಂದರ್ಭ ಪೂವಮ್ಮ ಅವರ ಕ್ರೀಡಾ ಸಾಧನೆ, ಪರಿಶ್ರಮ ಹಾಗೂ ಸಮರ್ಪಣಾ ಮನೋಭಾವವನ್ನು ಅವರು ಶ್ಲಾಘಿಸಿದರು.
‘ಕ್ರೀಡಾಪಟುಗಳು ತಮ್ಮ ಜೀವನದ ಅಮೂಲ್ಯ ಸಮಯವನ್ನು ದೇಶದ ಕೀರ್ತಿಗಾಗಿ ಮೀಸಲಿಟ್ಟು ಕಠಿಣ ಪರಿಶ್ರಮ ಪಡುತ್ತಾರೆ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವುದು ಸರ್ಕಾರದ ಜವಾಬ್ದಾರಿ. ಕೇವಲ ಪ್ರಶಂಸೆಗೆ ಸೀಮಿತವಾಗದೆ ಸಾಧನೆಗೆ ತಕ್ಕ ಆರ್ಥಿಕ ಗೌರವ, ಪ್ರೋತ್ಸಾಹ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಅವರು ಹೇಳಿದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭೆಗಳಿಗೆ ಸರ್ಕಾರದ ಮಾನ್ಯತೆ ಮತ್ತು ಪ್ರೋತ್ಸಾಹ ದೊರೆತರೆ, ಮುಂದಿನ ಪೀಳಿಗೆಯ ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೇರಣೆ ಸಿಗಲಿದೆ. ಎಂ.ಆರ್. ಪೂವಮ್ಮ ಅವರ ಸಾಧನೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಸೂಕ್ತ ಗೌರವಧನ ಘೋಷಿಸುವ ಮೂಲಕ ಕ್ರೀಡಾಪಟುಗಳಿಗೆ ಗೌರವ ನೀಡುವ ಮಾದರಿಯಾಗಬೇಕು ಎಂದು ಅವರು ಒತ್ತಾಯಿಸಿದರು.
ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಪೂವಮ್ಮ ಅವರ ಕ್ರೀಡಾ ಸಾಧನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ ಎಂದು ಅಕ್ಷಿತ್ ಸುವರ್ಣ ತಿಳಿಸಿದರು.
ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಸತ್ತಾರ್ ಬಂದರು, ಯುವ ಪದಾಧಿಕಾರಿಗಳಾದ ಆದರ್ಶ ಪೂಜಾರಿ, ನಿಶಾಂತ್, ಸುಶಾಂತ್, ವಿನಿತ್ ಮತ್ತಿತರರು ಇದ್ದರು.
What do you feel about this post?
Like
Love
Happy
Haha
Sad





