ಮಂಗಳೂರು: ನಗರದಲ್ಲಿ ಕ್ರಿಕೆಟ್ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ 50 ಎಕರೆ ಸರ್ಕಾರಿ ಜಮೀನನ್ನು ಖರೀದಿ ಅಥವಾ 50 ವರ್ಷಗಳ ದೀರ್ಘಾವಧಿ ಗುತ್ತಿಗೆ ಆಧಾರದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ನೀಡುವಂತೆ ಕೆಎಸ್‌ಸಿಎ ಅಧ್ಯಕ್ಷ ಬಿ.ಕೆ. ವೆಂಕಟೇಶ್ ಪ್ರಸಾದ್ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರಿಗೆ ಅ.1 ರಂದು ಪತ್ರ ಬರೆದಿದ್ದಾರೆ.
ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ರಿಕೆಟ್ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಕೆಎಸ್‌ಸಿಎ ಮುಂದಾಗಿದೆ. ರಾಜ್ಯ ಕ್ರಿಕೆಟ್ ತಂಡದಲ್ಲಿ ಪ್ರಸ್ತುತ ಶೇ 40 ಕ್ಕೂ ಹೆಚ್ಚು ಆಟಗಾರರು ವಿವಿಧ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಜಿಲ್ಲೆಗಳಲ್ಲಿ ಅಪಾರ ಕ್ರಿಕೆಟ್ ಪ್ರತಿಭೆ ಇದ್ದು, ಅವರಿಗೆ ಗುಣಮಟ್ಟದ ತರಬೇತಿ ಹಾಗೂ ಅಭ್ಯಾಸ ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಜಿಲ್ಲಾ ಕೇಂದ್ರವಾಗಿರುವ ಮಂಗಳೂರಿನಲ್ಲಿ ಸಮರ್ಪಕ ಕ್ರಿಕೆಟ್ ಮೂಲಸೌಕರ್ಯ ನಿರ್ಮಿಸುವ ಅಗತ್ಯವಿದ್ದು, ಸುಮಾರು 50 ಎಕರೆ ಜಮೀನು ಒದಗಿಸಿದರೆ ಕ್ರಿಕೆಟ್ ಮೈದಾನ, ಅಭ್ಯಾಸ ಸೌಲಭ್ಯಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದಾಗಿ ಕೆಎಸ್‌ಸಿಎ ತಿಳಿಸಿದೆ.
ಮೂರು ವರ್ಷಗಳಲ್ಲಿ ಅಭಿವೃದ್ಧಿ
ಜಮೀನು ಮಂಜೂರು ಮಾಡಿ ಸ್ವಾಧೀನಕ್ಕೆ ನೀಡಿದ ಬಳಿಕ ಮೂರು ವರ್ಷಗಳೊಳಗೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದಾಗಿ ಕೆಎಸ್‌ಸಿಎ ಭರವಸೆ ನೀಡಿದೆ. ಜಮೀನನ್ನು ಕ್ರಿಕೆಟ್ ಕ್ರೀಡೆಯ ಉತ್ತೇಜನ ಮತ್ತು ಅಭಿವೃದ್ಧಿಗೆ ಮಾತ್ರ ಬಳಸಿಕೊಳ್ಳುವುದಾಗಿ ಸಂಸ್ಥೆ ತಿಳಿಸಿದೆ ಎಂದು ಮನವಿಯಲ್ಲಿ ತಿಳಿಸಿದೆ ಎಂದು ಮೂಡಾ ಅಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಯುವ ಕ್ರಿಕೆಟಿಗರಿಗೆ ಗುಣಮಟ್ಟದ ತರಬೇತಿ ಮತ್ತು ಅಭ್ಯಾಸಕ್ಕೆ ಈ ಸೌಲಭ್ಯ ನೆರವಾಗಲಿದೆ. ಈ ಭಾಗದಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಆಟಗಾರರು ಹೊರಹೊಮ್ಮಲು ಇದು ಸಹಕಾರಿಯಾಗಲಿದೆ ಎಂದು ಸಂಸ್ಥೆ ಆಶಿಸಿದೆ.
ಮಂಗಳೂರಿನಲ್ಲಿ ನಿರ್ಮಾಣಗೊಳ್ಳಲಿರುವ ಕ್ರಿಕೆಟ್ ಮೂಲಸೌಕರ್ಯವನ್ನು ಮುಂದಿನ ದಿನಗಳಲ್ಲಿ ಕ್ರಿಕೆಟ್ ಅಭಿವೃದ್ಧಿಯ ಅತ್ಯುನ್ನತ ತರಬೇತಿ ಕೇಂದ್ರವಾಗಿ ರೂಪಿಸುವ ಉದ್ದೇಶವಿದೆ. ಇದರಿಂದ ಮಂಗಳೂರು ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ ಯುವ ಕ್ರೀಡಾಪಟುಗಳಿಗೂ ಪ್ರಯೋಜನವಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಮೀನನ್ನು ಖರೀದಿ ಅಥವಾ ದೀರ್ಘಾವಧಿ ಗುತ್ತಿಗೆ ಆಧಾರದಲ್ಲಿ ನೀಡುವಂತೆ ಕೋರಿರುವ ಕೆಎಸ್‌ಸಿಎ, ಶಿಕ್ಷಣ ಮತ್ತು ಕ್ರೀಡಾ ಸಂಸ್ಥೆಗಳಿಗೆ ಸಾಮಾನ್ಯವಾಗಿ ಅನ್ವಯಿಸುವ ಕನಿಷ್ಠ ದರಗಳನ್ನು ಪರಿಗಣಿಸುವಂತೆಯೂ ಮನವಿ ಮಾಡಿದೆ ಎಂದರು.
What do you feel about this post?
Like
Love
Happy
Haha
Sad




