ಮಂಗಳೂರು: ಮಹಾತ್ಮ ಗಾಂಧೀಜಿ ಅವರ ಬದುಕು ಇತರರಿಗೆ ಮಾದರಿಯಾಗಿದೆ. ಅವರು ಮಾತನಾಡುವುದಕ್ಕಿಂತಲೂ ಇತರರ ಮಾತುಗಳನ್ನು ಗೌರವದಿಂದ ಆಲಿಸಿ, ಪ್ರತಿಯೊಬ್ಬ ವ್ಯಕ್ತಿಗೂ ಗೌರವ ನೀಡುತ್ತಿದ್ದರು. ಇದೇ ಗುಣಗಳು ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ನಾಯಕನನ್ನಾಗಿ ರೂಪಿಸಿದವು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ನಗರದ ರಾಜಾಜಿ ಉದ್ಯಾನವನದಲ್ಲಿ ಶುಕ್ರವಾರ ಆಯೋಜಿಸಿದ್ದ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಖಾದಿ ಹಾರ ಹಾಗೂ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.
ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹೀದ್, ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ ಹಾಗೂ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಮಾತನಾಡಿದರು.
ಸರ್ವಧರ್ಮ ಪ್ರಾರ್ಥನೆ
ಸಮಾರಂಭದಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಗಾಂಧೀಜಿ ಅವರಿಗೆ ಪ್ರಿಯವಾದ ‘ರಘುಪತಿ ರಾಘವ ರಾಜಾರಾಮ್’ ಹಾಗೂ ‘ವೈಷ್ಣವ ಜನತೋ’ ಭಜನೆಗಳನ್ನು ಗಾಯನ ಮಾಡಲಾಯಿತು.
ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ವಿಶೇಷ ಸಂಚಿಕೆಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ
ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಸ್ನಾತಕ–ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಪೊಲೀಸ್ ಅಧೀಕ್ಷಕ ಅರುಣ್ ಕೆ., ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಮ್ ಪಾಂಡೆ, ಡಿಸಿಪಿ ಸ್ಯಾಮ್ ವರ್ಗಿಸ್, ಡಿಡಿಪಿಐ ಶಶಿಧರ್, ಭಾರತ್ ಸೇವಾದಳದ ಮುಖಂಡರಾದ ಬಶೀರ್ ಬೈಕಂಪಾಡಿ, ಟಿ.ಕೆ. ಸುಧೀರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಸ್ವಾಗತಿಸಿದರು. ಸೈದುದ್ದೀನ್ ನಿರೂಪಿಸಿದರು.
What do you feel about this post?
Like
Love
Happy
Haha
Sad




