ಕರಾವಳಿ ಅಭಿವೃದ್ಧಿಗೆ ಅವಕಾಶ, ಗೌರವ ಅಭಿನಂದನೆ ಸ್ವೀಕರಿಸಿದ ವಿಶ್ವಗುರು ಪ್ರಶಸ್ತಿ ಪುರಸ್ಕೃತ ಡಾ. ಮೋದಿ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಮಂಗಳೂರು: ಜ್ಞಾನ ಮತ್ತು ವಿವೇಕದ ಮೂಲಕ ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಭಾರತ ವಿಶ್ವಗುರುವಾಗಿ ನಂ.1 ಸ್ಥಾನಕ್ಕೇರಬೇಕು. ಹಿಂದೂ ಧರ್ಮ ಜಗತ್ತಿನ ಶ್ರೇಷ್ಠ ಧರ್ಮ ಎಂಬುದನ್ನು ಹಿಂದೂಗಳು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸಬೇಕು ಎಂದು ಸಿಂಗಾಪುರದ ಉದ್ಯಮಿ ಹಾಗೂ ವಿಶ್ವಗುರು ಪ್ರಶಸ್ತಿ ಪುರಸ್ಕೃತ ರಾಜರ್ಷಿ ಡಾ. ಬಿ.ಕೆ. ಮೋದಿ ಹೇಳಿದರು.

ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಅಸೋಸಿಯೇಶನ್ ವತಿಯಿಂದ ನಗರದ ಶಾರದಾ ವಿದ್ಯಾಲಯದ ಭೂವರಾಹ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗೌರವ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಭಾರತದ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಶಕ್ತಿಯನ್ನು ಜಾಗೃತಗೊಳಿಸುವುದು ತಮ್ಮ ಪರಮ ಕರ್ತವ್ಯ. ಪ್ರತಿಯೊಬ್ಬರಲ್ಲೂ ಜ್ಞಾನದ ದೀಪ ಬೆಳಗಿಸಿ, ಅವರನ್ನು ಸಂಘಟಿತರನ್ನಾಗಿ ಮಾಡುವುದು ತಮ್ಮ ಮುಖ್ಯ ಗುರಿ. ಹಿಂದೂಗಳು ಇನ್ನಷ್ಟು ಪ್ರವರ್ಧಮಾನಕ್ಕೆ ಬರಬೇಕು ಎಂದು ಅವರು ಹೇಳಿದರು.

ಯುವಜನರಿಗೆ ತತ್ವ ತಿಳಿಸಬೇಕು

ಬ್ರಾಹ್ಮಣರು ಸನಾತನ ಧರ್ಮದ ಯೋಧರಿದ್ದಂತೆ. ಪ್ರತಿಯೊಬ್ಬ ಬ್ರಾಹ್ಮಣನೂ ಸಾವಿರಾರು ಜನರಿಗೆ ದಾರಿದೀಪವಾಗುವ ಸಾಮರ್ಥ್ಯ ಹೊಂದಿದ್ದಾರೆ. ಕೇವಲ ಸಂಸ್ಕೃತ ಶ್ಲೋಕಗಳನ್ನು ಪಠಿಸುವುದಕ್ಕೆ ಸೀಮಿತವಾಗದೆ, ಪೂಜೆ ಮತ್ತು ಆಚರಣೆಗಳ ನೈಜ ಅರ್ಥ ಹಾಗೂ ತತ್ವಗಳನ್ನು ಯುವಜನರಿಗೆ ಅವರು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ವಿವರಿಸಬೇಕು. ಇದರಿಂದ ಸನಾತನ ಧರ್ಮದ ಬಗ್ಗೆ ಯುವಜನರಲ್ಲಿ ಹೆಮ್ಮೆ ಮೂಡಿಸಲು ಸಾಧ್ಯ ಎಂದರು.

ಇಂದಿನ ವೇಗದ ಜೀವನದಲ್ಲಿ ಪ್ರತಿಯೊಬ್ಬರಿಗೂ ಸಂಸ್ಕೃತ ವ್ಯಾಕರಣ ಕಲಿಯಲು ಸಮಯವಿರದಿರಬಹುದು. ಹೀಗಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಭಗವದ್ಗೀತೆ, ವೇದ, ಉಪನಿಷತ್ತುಗಳು ಹಾಗೂ ಶಂಕರಾಚಾರ್ಯರ ಭಾಷ್ಯಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಸಾರ ಮಾಡಬೇಕು ಎಂದರು.

ಮಂಗಳೂರು ಹಾಗೂ ಕರಾವಳಿ ಭಾಗದ ಅನೇಕ ಧುರೀಣರು ಜಗತ್ತಿನಾದ್ಯಂತ, ವಿಶೇಷವಾಗಿ ಅಮೆರಿಕದಲ್ಲಿ ಪ್ರಮುಖ ಉದ್ಯಮಿಗಳಾಗಿ ಯಶಸ್ವಿಯಾಗಿದ್ದಾರೆ. ಕರಾವಳಿಯ ಸುಂದರ ಸಮುದ್ರ ತೀರಗಳನ್ನು ಬಳಸಿಕೊಂಡು ಈ ಪ್ರದೇಶವನ್ನು ವಿಶ್ವದರ್ಜೆಯ ಪ್ರವಾಸಿ ಹಾಗೂ ಆರ್ಥಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ವಿಪುಲ ಅವಕಾಶಗಳಿವೆ ಎಂದರು.

‘ಸನಾತನ ಧರ್ಮಕ್ಕೆ ಜಾಗತಿಕ ಮಾನ್ಯತೆ’

ಅಭಿನಂದನಾ ಭಾಷಣ ಮಾಡಿದ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ಬಿ.ಕೆ. ಮೋದಿ ಅವರು ಜಗತ್ತಿನಾದ್ಯಂತ ಸನಾತನ ಧರ್ಮವನ್ನು ಪ್ರತಿಪಾದಿಸುತ್ತಿದ್ದಾರೆ. ಜಗತ್ತಿನ ಶಾಂತಿಗೆ ಸನಾತನ ಧರ್ಮ ಅಗತ್ಯ ಎಂಬುದು ಅವರ ನಿಲುವಾಗಿದೆ. ಯಶಸ್ವಿ ಉದ್ಯಮಿಯಾಗಿರುವ ಅವರು ಕೈಗಾರಿಕಾ ಕ್ಷೇತ್ರದ ವಿವಿಧ ವಲಯಗಳಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ಮೋದಿ ಜೆರಾಕ್ಸ್ ಮೂಲಕ ಪರಿಚಿತರಾದ ಅವರು, ಗಾಜಿಯಾಬಾದ್‌ ಪ್ರತಿಷ್ಠಿತ ಮೋದಿ ಕುಟುಂಬದಲ್ಲಿ ಜನಿಸಿದ್ದು, ಭಾರತದ ಶ್ರೇಷ್ಠ ಸಂತರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಸನಾತನ ಧರ್ಮ ಜಗತ್ತಿನಾದ್ಯಂತ ಪ್ರವರ್ಧಮಾನಕ್ಕೆ ಬಂದು ಉಳಿಯಬೇಕು ಎಂಬುದು ಅವರ ಆಶಯವಾಗಿದೆ. ಅವರು ಹುಟ್ಟು ಬ್ರಾಹ್ಮಣರಲ್ಲದಿದ್ದರೂ ಬ್ರಾಹ್ಮಣ್ಯದ ಉನ್ನತಿಗಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದೂ ಧರ್ಮದ ಮೇಲಿನ ಅವರ ಪ್ರೀತಿಯಿಂದ ಅಮೆರಿಕದ ಹಿಂದೂಗಳು ಅವರಿಗೆ ‘ವಿಶ್ವಗುರು’ ಎಂಬ ಬಿರುದು ನೀಡಿ ಗೌರವಿಸಿದ್ದಾರೆ ಎಂದು ಹೇಳಿದರು.

ಹಿಂದೂ ಧರ್ಮಕ್ಕೆ ಅನ್ಯಧರ್ಮೀಯರಿಂದ ಅಪಾಯವಿದೆ ಎನ್ನುವುದಕ್ಕಿಂತ, ಹಿಂದೂ ಧರ್ಮದಲ್ಲಿ ಹುಟ್ಟಿದ ಕೆಲವರಿಂದಲೇ ಸಮಸ್ಯೆಗಳು ಎದುರಾಗುತ್ತಿವೆ. ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ಪುರಾಣಿಕ್ ಹೇಳಿದರು.

ದುಬೈ ಉದ್ಯಮಿ ಋಷಿ ವಿಜಯವ್ಯಾಸ ಮಾತನಾಡಿ, ಬಿ.ಕೆ. ಮೋದಿ ಅವರು ಶ್ರೀಮಂತ ಉದ್ಯಮಿ ಆಗಿದ್ದರೂ ಸನಾತನ ಧರ್ಮದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.

ಓಂಕಾರ ಉಚ್ಚಾರಣೆಯ ಪ್ರಾತ್ಯಕ್ಷಿಕೆ

ಕಾರ್ಯಕ್ರಮದಲ್ಲಿ ಡಾ. ಬಿ.ಕೆ. ಮೋದಿ ಅವರು ಸಭಿಕರಿಗೆ ಆರು ಸೆಕೆಂಡ್‌ಗಳ ಕಾಲ ಸರಿಯಾದ ಕಂಪನದೊಂದಿಗೆ ‘ಓಂ’ಕಾರವನ್ನು ಉಚ್ಚರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಅಭ್ಯಾಸ ಮಾಡಿಸಿದರು. ಓಂಕಾರವು ಸೃಷ್ಟಿಯ ಮೂಲ ಧ್ವನಿಯಾಗಿದ್ದು, ಧನಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನವಭಾರತ ವೃತ್ತದಿಂದ ಶಾರದಾ ವಿದ್ಯಾಲಯದವರೆಗೆ ಬಿ.ಕೆ. ಮೋದಿ ಅವರನ್ನು ಚೆಂಡೆ, ಕೊಂಬು ಹಾಗೂ ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಗೌರವ ಅಭಿನಂದನೆಯ ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.

ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಅಸೋಸಿಯೇಶನ್ ಅಧ್ಯಕ್ಷ ಸುಬ್ರಹ್ಮಣ್ಯ ರಾವ್, ಶಾರದಾ ವಿದ್ಯಾಸಂಸ್ಥೆಗಳ ನಿರ್ದೇಶಕ ಹಾಗೂ ಟ್ರಸ್ಟಿ ಸಮೀರ್ ಪುರಾಣಿಕ್ ಇದ್ದರು.

ಶಾರದಾ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷ ಡಾ. ಸೀತಾರಾಮ ಭಟ್ ದಂಡತೀರ್ಥ ಸ್ವಾಗತಿಸಿದರು. ದಯಾನಂದ ಕಟೀಲ್ ನಿರೂಪಿಸಿದರು. ವಿವಿಧ ವಿಪ್ರ ಸಂಘಟನೆಗಳ ಪ್ರತಿನಿಧಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸುಧಾಕರ ರಾವ್ ಪೇಜಾವರ ಗೌರವ ಸ್ವೀಕರಿಸಿದವರ ವಿವರ ನೀಡಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry