ಸೇವೆ, ಶಿಸ್ತು, ನಾಯಕತ್ವಕ್ಕೆ ಸ್ಕೌಟಿಂಗ್ ಒತ್ತು: ಉಪ ಆಯುಕ್ತ ವಿವೇಕ ಆಳ್ವ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ

Spread the love

ಮೂಡುಬಿದಿರೆ: ಯುವಕರಲ್ಲಿರುವ ಶಕ್ತಿ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಳ್ಳುವಂತೆ ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಾಂಸ್ಕೃತಿಕ ವಿನಿಮಯ ವಿಭಾಗದ ರಾಷ್ಟ್ರೀಯ ಉಪ ಆಯುಕ್ತ ವಿವೇಕ ಆಳ್ವ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಅ.2ರಿಂದ 6ರವರೆಗೆ ಆಯೋಜಿಸಿರುವ ಎರಡನೇ ವರ್ಷದ ರಾಷ್ಟ್ರೀಯ ಮಟ್ಟದ ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ (ಎಐ), ಯುವ ಉದ್ಯಮಶೀಲತೆ ಹಾಗೂ ವಿಜ್ಞಾನ–ತಂತ್ರಜ್ಞಾನ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಇಂದಿಗೂ ಜಗತ್ತಿನಾದ್ಯಂತ ಗೌರವಿಸಲ್ಪಡುತ್ತಿವೆ. ಅಂತಹ ಮಹನೀಯರನ್ನು ಸ್ಮರಿಸುವ ದಿನದಂದೇ ಯುವಕರಿಗಾಗಿ ಈ ಕಾರ್ಯಾಗಾರ ಆರಂಭವಾಗುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಕೃತಕ ಬುದ್ಧಿಮತ್ತೆ ಜವಾಬ್ದಾರಿಯುತವಾಗಿ ಬಳಕೆಯಾಗಲಿ

ಕಾರ್ಯಾಗಾರದಲ್ಲಿ ಮಾತನಾಡಿದ ಅಪ್ಲೈಡ್ ಸಿಸ್ಟಮ್ಸ್‌ನ ಉತ್ಪನ್ನ ವಿತರಣೆ ಮತ್ತು ಸೇವೆಗಳ ಉಪಾಧ್ಯಕ್ಷ ವೆಂಕಟೇಶ್ ಸಂಗನಾಳ್, ಅಗತ್ಯವಿರುವವರಿಗೆ ನೆರವಾಗುವುದು, ಸಮಾಜಕ್ಕೆ ಸೇವೆ ಸಲ್ಲಿಸುವುದು ಹಾಗೂ ಪರಿಸರ ಸಂರಕ್ಷಣೆ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಯ ಪ್ರಮುಖ ಆಶಯಗಳಾಗಿವೆ ಎಂದರು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಯುವ ಕಾರ್ಯಕ್ರಮಗಳ ಸಹಾಯಕ ನಿರ್ದೇಶಕ ಅನಲೇಂದರ್ ಶರ್ಮಾ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶದ ಯುವಜನತೆಗೆ ಸದಾ ಆದರ್ಶಪ್ರಾಯರು ಎಂದರು.

ಜಿಲ್ಲಾ ಗೈಡ್ ಕಮಿಷನರ್ ವಿಮಲಾ ರಂಗಯ್ಯ ಮಾತನಾಡಿ, ಕಾರ್ಯಾಗಾರವು ಯುವಕರ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿದ್ದು, ಇಲ್ಲಿ ಪಡೆಯುವ ಅನುಭವವನ್ನು ಮುಂದಿನ ಶೈಕ್ಷಣಿಕ ಹಾಗೂ ವೃತ್ತಿ ಬದುಕಿನಲ್ಲಿ ಬಳಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರೊ. ಹರೀಶ್ ಕುಂದರ್, ಯೋಗೇಂದ್ರ, ವೇಣುರಾವ್ ದೇವ್, ಚಂದ್ರ, ಸೃಜಿತ್ ಶ್ರೀನಾಥ್, ಸಂಧ್ಯಾ, ಭರತ್‌ರಾಜ್ ಸೇರಿದಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿವಿಧ ವಿಭಾಗಗಳ ಪ್ರತಿನಿಧಿಗಳು ಇದ್ದರು.

ದೇಶದ ಎಲ್ಲ ರಾಜ್ಯಗಳಿಂದ ಒಟ್ಟು 161 ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ. ಅಪೇಕ್ಷಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ನವೀನ್ ಅಂಬೂರಿ ವಂದಿಸಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *