ಅಮೆರಿಕದ ಶಿಕಾಗೊದಲ್ಲಿ ಆರೋಗ್ಯ ಸಚಿವ ಖಾದರ್‌ಗೆ ಜಾಗತಿಕ ನಾಗರಿಕ ನಾಯಕತ್ವ ಪ್ರಶಸ್ತಿ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

‌ಮಂಗಳೂರು: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್ ಅವರಿಗೆ ಅಮೆರಿಕದ ಪ್ರತಿಷ್ಠಿತ ಅಮೆರಿಕನ್ ಮಲ್ಟಿ ಎಥ್ನಿಕ್ ಕಮಿಷನ್ (ಎಎಂಇಸಿ) ವತಿಯಿಂದ ನೀಡಲಾಗುವ ‘ಜಾಗತಿಕ ನಾಗರಿಕ ನಾಯಕತ್ವ ಪ್ರಶಸ್ತಿ’ಘೋಷಿಸಲಾಗಿದೆ.

<

ಅಮೆರಿಕದ ಇಲಿನಾಯ್ಸ್ ರಾಜ್ಯದ ನೇಪರ್‌ವಿಲ್‌ನ ಯೆಲ್ಲೋ ಬಾಕ್ಸ್ ಸಭಾಂಗಣದಲ್ಲಿ ಇದೇ 25 ರಂದು ನಡೆವ 15ನೇ ವಾರ್ಷಿಕ ಕಾಂಗ್ರೆಸ್ ಜಾಗತಿಕ ಚಾಂಪಿಯನ್ಸ್ ಗಾಲಾ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಸಾರ್ವಜನಿಕ ಆರೋಗ್ಯ ಸೇವೆ, ಸಮಗ್ರ ಆಡಳಿತ, ಜನಕೇಂದ್ರಿತ ಅಭಿವೃದ್ಧಿ ಹಾಗೂ ಹಲವು ದಶಕಗಳ ಸಾರ್ವಜನಿಕ ಸೇವೆಯಲ್ಲಿ ಸಲ್ಲಿಸಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಖಾದರ್ ಅವರನ್ನು ಆಯ್ಕೆ ಮಾಡಲಾಗಿದೆ. ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೌಷ್ಟಿಕ ಆಹಾರ ಹಾಗೂ ಸಾರ್ವಜನಿಕ ನೀತಿ ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಹಕಾರ ವೃದ್ಧಿಗೆ ಅವರು ನೀಡಿರುವ ಒತ್ತು ಕೂಡ ಈ ಗೌರವಕ್ಕೆ ಕಾರಣವಾಗಿದೆ.

ಯು.ಟಿ. ಖಾದರ್ ಅವರು ನಿಜವಾದ ಜನಸೇವಕ ನಾಯಕತ್ವದ ಪ್ರತೀಕವಾಗಿದ್ದಾರೆ. ಆರೋಗ್ಯ ಸೇವೆಗಳ ಸುಧಾರಣೆ, ಸಾಮಾಜಿಕ ಸಮಾನತೆ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಅವರು ನೀಡಿರುವ ಕೊಡುಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಎಎಂಇಸಿ ಸಂಸ್ಥಾಪಕ ಅಧ್ಯಕ್ಷ ಹಾಗೂ ಜಾಗತಿಕ ಕಾರ್ಯತಂತ್ರ ಮೈತ್ರಿಕೂಟದ ಅಧ್ಯಕ್ಷ ಡಾ. ವಿಜಯ್ ಜಿ. ಪ್ರಭಾಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವರ್ಷದ ಸಮಾರಂಭದಲ್ಲಿ ಉದ್ಯಮ, ಆರೋಗ್ಯ, ಶಿಕ್ಷಣ, ಮಾಧ್ಯಮ ಮತ್ತು ಸಾರ್ವಜನಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಗೌರವಿಸಲಾಗುತ್ತಿದೆ. ದೂರಸಂಪರ್ಕ ತಜ್ಞ ಸ್ಯಾಮ್ ಪಿತ್ರೋಡಾ, ವಾನ್‌ಶಿಯಾಂಗ್ ಅಮೆರಿಕ ಸಂಸ್ಥೆಯ ಅಧ್ಯಕ್ಷ ಪಿನ್ ನಿ, ಎಬಿಸಿ–7 ಸುದ್ದಿ ವಾಹಿನಿಯ ನಿರೂಪಕಿ ಜೂಡಿ ಹ್ಸು ಸೇರಿದಂತೆ ಹಲವು ಜಾಗತಿಕ ಗಣ್ಯರು ಪ್ರಶಸ್ತಿಗೆ ಭಾಜನರಾಗಲಿದ್ದಾರೆ.

ಪ್ರಶಸ್ತಿ ಸ್ವೀಕಾರದ ಜತೆಗೆ ಸಚಿವ ಖಾದರ್ ಅವರ ಅಮೆರಿಕ ಪ್ರವಾಸದಲ್ಲಿ ಆರೋಗ್ಯ, ಪೌಷ್ಟಿಕ ಆಹಾರ ಮತ್ತು ವೈದ್ಯಕೀಯ ನಾವೀನ್ಯತೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳು ನಿಗದಿ ಆಗಿವೆ.

ಜುಲೈ 24 ರಂದು ಶಿಕಾಗೊದಲ್ಲಿರುವ ಭಾರತದ ಕಾನ್ಸುಲೇಟ್‌ನಲ್ಲಿ ನಡೆಯುವ “ಆರೋಗ್ಯಕರ, ಸುಸ್ಥಿರ ಹಾಗೂ ಆಹಾರ ಸುರಕ್ಷಿತ ಭವಿಷ್ಯಕ್ಕಾಗಿ ಭಾರತ–ಅಮೆರಿಕ ಸಿರಿಧಾನ್ಯ ಸಹಭಾಗಿತ್ವ” ಕುರಿತ ದುಂಡುಮೇಜಿನ ಸಭೆಯಲ್ಲಿ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಈ ಸಭೆಯಲ್ಲಿ ನೀತಿ ರೂಪಿಸುವವರು, ವಿಜ್ಞಾನಿಗಳು, ವೈದ್ಯರು, ಕೃಷಿ ತಜ್ಞರು ಹಾಗೂ ಕೈಗಾರಿಕಾ ಪ್ರತಿನಿಧಿಗಳು ಪಾಲ್ಗೊಂಡು ಸಿರಿಧಾನ್ಯ ಆಧಾರಿತ ಪೌಷ್ಟಿಕ ಆಹಾರ, ಆಹಾರ ಭದ್ರತೆ ಹಾಗೂ ರೋಗ ತಡೆ ಕುರಿತು ಚರ್ಚಿಸಲಿದ್ದಾರೆ.

ಅದೇ ದಿನ ಶಿಕಾಗೊದ ಮಾಲ್ಕಮ್ ಎಕ್ಸ್ ಕಾಲೇಜಿಗೆ ಭೇಟಿ ನೀಡಿ, ರೋಬೋಟಿಕ್ ಹೊರರೋಗಿ ಚಿಕಿತ್ಸಾ ವ್ಯವಸ್ಥೆ ಕುರಿತು ಅಧ್ಯಯನ ನಡೆಸಲಿದ್ದಾರೆ. ಇಲಿನಾಯ್ಸ್ ವಿಶ್ವವಿದ್ಯಾಲಯ, ರಶ್ ವಿಶ್ವವಿದ್ಯಾಲಯ ಆರೋಗ್ಯ ವ್ಯವಸ್ಥೆ, ಇಲಿನಾಯ್ಸ್ ತಾಂತ್ರಿಕ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳ ತಜ್ಞರೊಂದಿಗೆ ಆರೋಗ್ಯ ಕ್ಷೇತ್ರದ ನಾವೀನ್ಯತೆ, ಡಿಜಿಟಲ್ ವೈದ್ಯಕೀಯ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಆಧುನಿಕ ವೈದ್ಯಕೀಯ ತಂತ್ರಜ್ಞಾನ ಕುರಿತು ಸಮಾಲೋಚನೆ ನಡೆಸಲಿದ್ದಾರೆ.

ಜುಲೈ 27 ರಂದು ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ನಡೆಯುವ “ಆರೋಗ್ಯಕರ ಮಕ್ಕಳು–ಆರೋಗ್ಯಕರ ಆಹಾರ–ಆರೋಗ್ಯಕರ ಭವಿಷ್ಯ” ವಿಷಯಾಧಾರಿತ ಸಂವಾದದಲ್ಲಿ ಭಾಗವಹಿಸಿ, ಆಹಾರ ವಿಜ್ಞಾನ, ಕೃಷಿ ಹಾಗೂ ರೋಗ ತಡೆ ನಡುವಿನ ಸಂಬಂಧ ಕುರಿತು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಬಳಿಕ ಜುಲೈ 28 ರಂದು ವಾಷಿಂಗ್ಟನ್‌ಗೆ ಭೇಟಿ ನೀಡಿ ವಿವಿಧ ರಾಷ್ಟ್ರೀಯ ಸಂಸ್ಥೆಗಳು ಹಾಗೂ ನಾಯಕರೊಂದಿಗೆ ಮಾತುಕತೆ ನಡೆಸಲಿರುವ ಅವರು, ಜುಲೈ 30ರಂದು ಬೆಂಗಳೂರಿಗೆ ಮರಳಲಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *