ಕಾರವಾರ: ರಸ್ತೆ ಮೇಲೆ ಏಕಾಏಕಿ ಅಡ್ಡ ಬಂದ ಹಸುವಿನಿಂದ ಸಂಭವಿಸಿದ ಅಪಘಾತದಲ್ಲಿ ಕಾರವಾರದ ಖ್ಯಾತ ಚರ್ಮರೋಗ ತಜ್ಞ ಡಾ. ಸುಭಾಷ್ ತಾಂಡೇಲ್ ಅವರು ಮೃತಪಟ್ಟಿದ್ದಾರೆ.
ತಾಲೂಕಿನ ಮಾಜಾಳಿ ಬಳಿ ಸಂಭವಿಸಿದ ಈ ಘಟನೆ ಸಂಭವಿಸಿದೆ. ಡಾ. ಸುಭಾಷ್ ತಾಂಡೇಲ್ ಅವರು ಪ್ರಯಾಣಿಸುತ್ತಿದ್ದ ಬೈಕ್ ಗೆ ಏಕಾಏಕಿ ಹಸು ಅಡ್ಡ ಬಂದಿದೆ. ಇದರಿಂದ ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಡಾ. ಸುಭಾಷ್ ತಾಂಡೇಲ್ ಅವರು ಹಲವು ವರ್ಷಗಳ ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಕಾರವಾರದ ಜಿಲ್ಲಾ ಆಸ್ಪತ್ರೆ ಸೇರಿದಂತೆ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು, ಬಳಿಕ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿಯೂ (ಕ್ರಿಮ್ಸ್) ಸೇವೆ ಸಲ್ಲಿಸಿದ್ದರು.
ಚರ್ಮರೋಗ ತಜ್ಞರಾಗಿ ಗುರುತಿಸಿಕೊಂಡಿದ್ದ ಅವರು, ಈಚೆಗಷ್ಟೇ ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರು. ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ತಾಂಡೇಲ್ ಅವರ ಪುತ್ರ. ಡಾ. ಸುಭಾಷ್ ತಾಂಡೇಲ್ ಅವರ ನಿಧನಕ್ಕೆ ಗಣ್ಯರು ಹಾಗೂ ವೈದ್ಯಕೀಯ ಕ್ಷೇತ್ರದ ಹಲವರು ಕಂಬನಿ ಮಿಡಿದಿದ್ದಾರೆ.



