ಡಾ. ಸುರೇಶ್ ರಾವ್ ನೇತೃತ್ವದ ಎಂಐಒ ಆಸ್ಪತ್ರೆಯಲ್ಲಿ ವಿನೂತನ ಶೈಲಿಯ ಆಯುಧ ಪೂಜೆಯ ಸಂಭ್ರಮ

ಆರೋಗ್ಯ ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಆರ್ಥಿಕ ಸ್ಥಿತಿಗಿಂತ ಮಾನವೀಯತೆ ಮತ್ತು ರೋಗಿಗಳ ಘನತೆಗೆ ಆದ್ಯತೆ ನೀಡಬೇಕು ಎಂಬ ಸಂದೇಶವನ್ನು ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂಐಒ) ಆಸ್ಪತ್ರೆಯ ಆಯುಧ ಪೂಜೆ ಸಾರಿತು.

ಆಸ್ಪತ್ರೆಯ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳಿಗೆ ಬಡತನ ರೇಖೆಗಿಂತ ಕೆಳಗಿರುವ ಎರಡು ಕುಟುಂಬಗಳ ಸದಸ್ಯರು ಪೂಜೆ ಸಲ್ಲಿಸಿದ್ದು, ಕಾರ್ಯಕ್ರಮದ ವಿಶೇಷತೆ ಆಗಿತ್ತು.

ಆಸ್ಪತ್ರೆಯಲ್ಲಿ 25 ಕೋಟಿ ವೆಚ್ಚದ ಅತ್ಯಾಧುನಿಕ ಟ್ರೂಬೀಮ್ ವಿಕಿರಣ ಚಿಕಿತ್ಸೆ ವ್ಯವಸ್ಥೆ ಹಾಗೂ 10 ಕೋಟಿ ವೆಚ್ಚದ ಪಿಇಟಿ-ಸಿಟಿ ತಪಾಸಣಾ ಯಂತ್ರವನ್ನು ಅಳವಡಿಸಲಾಗಿದೆ. ಒಟ್ಟು 35 ಕೋಟಿ ಮೌಲ್ಯದ ಈ ಉಪಕರಣಗಳು ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಿವೆ.

ಆಸ್ಪತ್ರೆಯ ವೈದ್ಯಕೀಯ ಮತ್ತು ಆಡಳಿತ ವಿಭಾಗದ ನಿರ್ದೇಶಕ ಡಾ. ಸುರೇಶ್ ರಾವ್ ಅವರ ನೇತೃತ್ವದಲ್ಲಿ ಈ ವಿಶಿಷ್ಟ ಉಪಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ಆಸ್ಪತ್ರೆಯ ಮಾಲೀಕರು, ನಿರ್ದೇಶಕರು ಅಥವಾ ಹಿರಿಯ ವೈದ್ಯರು ಪೂಜೆ ಸಲ್ಲಿಸುವ ಸಂಪ್ರದಾಯದ ಬದಲಿಗೆ, ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ಈ ಅವಕಾಶ ಕಲ್ಪಿಸಲಾಗಿತ್ತು.

ರೋಗಿಯ ಆರ್ಥಿಕ ಸ್ಥಿತಿಗತಿ ಅವರ ಗೌರವವನ್ನು ನಿರ್ಧರಿಸಬಾರದು. ಹಣಕಾಸಿನ ತೊಂದರೆಗಳು ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆಗೆ ಅಡ್ಡಿಯಾಗಬಾರದು ಎಂಬ ಆಶಯವನ್ನು ಈ ಕಾರ್ಯಕ್ರಮ ವ್ಯಕ್ತಪಡಿಸಿತು.

ಜೀವ ಉಳಿಸುವ, ನೋವು ಕಡಿಮೆ ಮಾಡುವ ಹಾಗೂ ಕ್ಯಾನ್ಸರ್ ರೋಗಿಗಳಲ್ಲಿ ಭರವಸೆ ಮೂಡಿಸುವ ಉದ್ದೇಶದಿಂದ ಅಳವಡಿಸಲಾದ ಉಪಕರಣಗಳಿಗೆ ಆಯುಧ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಶ್ಮಿ ಮತ್ತು ಪ್ರದೀಪ್ ಕುಮಾರ್ ಹಾಗೂ ಸವಿತಾ ಮತ್ತು ಲಕ್ಷ್ಮಣ್ ಗೌಡ ಅವರ ಕುಟುಂಬಗಳು ಪಾಲ್ಗೊಂಡಿದ್ದವು.

ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಿಗೆ ಆಧುನಿಕ, ಕೈಗೆಟುಕುವ ಹಾಗೂ ಮಾನವೀಯತೆಯಿಂದ ಕೂಡಿದ ಕ್ಯಾನ್ಸರ್ ಚಿಕಿತ್ಸೆಯನ್ನು ಒದಗಿಸುವ ಬದ್ಧತೆಯನ್ನು ಈ ಕಾರ್ಯಕ್ರಮ ಮತ್ತೊಮ್ಮೆ ಸಾರಿದೆ ಎಂದು ಆಸ್ಪತ್ರೆ ತಿಳಿಸಿದೆ.

Leave a Reply

Your email address will not be published. Required fields are marked *