ಸೆಪ್ಟಂಬರ್ ಒಳಗೆ ಮೊದಲ ನೋಟಿಸ್‌ಗಳ ಪ್ರಕರಣ ಇತ್ಯರ್ಥ ಗುರಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಜಿಲ್ಲಾ ಸುದ್ದಿ ಕಾರವಾರ ರಾಜ್ಯ ಶಿರಸಿ

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಮ್ಯಾಪಿಂಗ್ ಆಗದಿರುವ ಹಾಗೂ ಮ್ಯಾಪಿಂಗ್‌ನಲ್ಲಿ ತಾರ್ಕಿಕ ವ್ಯತ್ಯಾಸ ಹೊಂದಿರುವ ಮತದಾರರಿಗೆ ನೀಡಲಾಗುತ್ತಿರುವ ಮೊದಲ ನೋಟಿಸ್‌ಗಳ ಪ್ರಕರಣಗಳನ್ನು ಸೆಪ್ಟಂಬರ್ ಅಂತ್ಯದೊಳಗೆ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ತಿಳಿಸಿದರು.

<

ಶುಕ್ರವಾರ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮ್ಯಾಪಿಂಗ್ ಆಗದಿರುವ, ಮ್ಯಾಪಿಂಗ್‌ನಲ್ಲಿ ತಾರ್ಕಿಕ ವ್ಯತ್ಯಾಸ ಹೊಂದಿರುವ ಹಾಗೂ ಇತರ ಅಗತ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 65,327 ಮತದಾರರಿಗೆ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮೂಲಕ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ. ನೋಟಿಸ್‌ ಪಡೆದ ಮತದಾರರು ನೋಟಿಸ್‌ನಲ್ಲಿ ನಮೂದಿಸಿರುವ ದಿನಾಂಕ, ಸಮಯ ಹಾಗೂ ಸ್ಥಳದಲ್ಲಿ ಖುದ್ದಾಗಿ ವಿಚಾರಣೆಗೆ ಹಾಜರಾಗಿ, ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದರು.

ಮೊದಲ ನೋಟಿಸ್‌ನ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಮತದಾರರಿಗೆ ಅವರ ಅನುಕೂಲಕ್ಕೆ ತಕ್ಕಂತೆ ಮತ್ತೊಂದು ದಿನಾಂಕ ನಿಗದಿಪಡಿಸಿ ದಾಖಲೆಗಳೊಂದಿಗೆ ಹಾಜರಾಗಲು ಅವಕಾಶ ನೀಡಲಾಗುವುದು. ಗರಿಷ್ಠ ಎರಡು ವಿಚಾರಣಾ ದಿನಾಂಕಗಳನ್ನು ನೀಡಲು ಮಾತ್ರ ಅವಕಾಶವಿರುತ್ತದೆ ಎಂದರು.

ಅಕ್ಟೋಬರ್ 1, 2026ಕ್ಕೆ 18 ವರ್ಷ ಪೂರ್ಣಗೊಳಿಸುವ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಲು ಅವಕಾಶವಿದೆ. ಇದಕ್ಕಾಗಿ ನಮೂನೆ–6ರೊಂದಿಗೆ ನಿಗದಿತ ದಾಖಲೆಗಳನ್ನು ಸಲ್ಲಿಸುವುದರ ಜತೆಗೆ ಡಿಕ್ಲರೇಷನ್‌ ಫಾರಂ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಅದೇ ರೀತಿ ಮತದಾರರ ಪಟ್ಟಿಯಿಂದ ಹೆಸರು ಕಡಿತಗೊಳಿಸಲು ನಮೂನೆ–7 ಸಲ್ಲಿಸಬಹುದು. ಹೆಸರು, ವಿಳಾಸ ಸೇರಿದಂತೆ ವಿವಿಧ ವಿವರಗಳ ತಿದ್ದುಪಡಿ ಹಾಗೂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ಅಥವಾ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಹೆಸರು ವರ್ಗಾಯಿಸಲು ಸಹ ಅವಕಾಶವಿದೆ.

ಮತದಾರರಿಗೆ ಈ ಕುರಿತು ಮಾಹಿತಿ ಹಾಗೂ ಅಗತ್ಯ ನೆರವು ಒದಗಿಸುವ ಉದ್ದೇಶದಿಂದ ಸೆಪ್ಟಂಬರ್ 19 ಮತ್ತು 20ರಂದು ವಿಶೇಷ ಅಭಿಯಾನಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯಲ್ಲಿ ಸ್ವೀಕರಿಸಲಾಗುವ ಅರ್ಜಿಗಳನ್ನು ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸಲಾಗುವುದು. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ವಂಚಿತರಾಗದಂತೆ ಅಗತ್ಯ ಎಚ್ಚರಿಕೆ ವಹಿಸಲಾಗುವುದು ಎಂದರು.

ಅಕ್ಟೋಬರ್ 22ರೊಳಗೆ ಎಲ್ಲ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಈ ಪ್ರಕ್ರಿಯೆ ಸುಗಮವಾಗಿ ನಡೆಯಲು ಎಲ್ಲ ರಾಜಕೀಯ ಪಕ್ಷಗಳೂ ಅಗತ್ಯ ಸಹಕಾರ ನೀಡಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಶಂಭು ಶೆಟ್ಟಿ, ಬಾಬು ಶೇಖ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳೂಂಕೆ, ಜೆಡಿಎಸ್ ವಕ್ತಾರ ಉದಯ ಭೋವಿ, ಕೃಷ್ಣ ಲಿಂಗಣಕರ್ ಹಾಗೂ ಜ್ಞಾನೇಶ್ವರ ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *