ಮಂಗಳೂರು: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಜೂ.30ರಿಂದ ಆರಂಭವಾಗಲಿದ್ದು, ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದರ್ಶನ್ ಎಚ್.ವಿ. ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಜೂನ್ 1 ಅನ್ನು ಅರ್ಹತಾ ದಿನಾಂಕ ಎಂದು ಪರಿಗಣಿಸಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳ ಸಿದ್ಧತೆ, ತರಬೇತಿ ಹಾಗೂ ಮುದ್ರಣ ಕಾರ್ಯಗಳು ಜೂ.20ರಿಂದ 29ರವರೆಗೆ ನಡೆಯಲಿದ್ದು, ಬಳಿಕ ಒಂದು ತಿಂಗಳ ಕಾಲ ಬಿಎಲ್‌ಒಗಳು ಮನೆ ಭೇಟಿಯ ಮೂಲಕ ಮಾಹಿತಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಜುಲೈ 29 ರೊಳಗೆ ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ ಪ್ರಕ್ರಿಯೆಯೂ ಪೂರ್ಣಗೊಳ್ಳಲಿದೆ. ಎಸ್‌ಐಆರ್ ಪ್ರಕ್ರಿಯೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 8 ಮತದಾರರ ನೋಂದಣಾಧಿಕಾರಿಗಳು (ಇಆರ್‌ಒ), 10 ಸಹಾಯಕ ಮತದಾರರ ನೋಂದಣಾಧಿಕಾರಿಗಳು (ಎಇಆರ್‌ಒ), 206 ಮತಗಟ್ಟೆ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರು ಹಾಗೂ 1,876 ಮತಗಟ್ಟೆ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ನಡೆದಿರುವ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಹಲವು ಕ್ಷೇತ್ರಗಳ ಮತದಾರರು ಹೊರಗುಳಿದಿರುವುದು ಕಂಡುಬಂದಿದೆ. ಮಂಗಳೂರು ನಗರ ಉತ್ತರ ಮತ್ತು ಮಂಗಳೂರು ನಗರ ದಕ್ಷಿಣ ಕ್ಷೇತ್ರಗಳಲ್ಲಿ ಈ ಸಂಖ್ಯೆ ಹೆಚ್ಚಾಗಿದೆ.
ಬೆಳ್ತಂಗಡಿಯಲ್ಲಿ 9,637, ಮೂಡುಬಿದಿರೆಯಲ್ಲಿ 20,128, ಮಂಗಳೂರು ನಗರ ಉತ್ತರದಲ್ಲಿ 50,558, ಮಂಗಳೂರು ನಗರ ದಕ್ಷಿಣದಲ್ಲಿ 63,853, ಮಂಗಳೂರು ಕ್ಷೇತ್ರದಲ್ಲಿ 25,042, ಬಂಟ್ವಾಳದಲ್ಲಿ 14,430, ಪುತ್ತೂರಿನಲ್ಲಿ 15,802 ಹಾಗೂ ಸುಳ್ಯದಲ್ಲಿ 7,016 ಮತದಾರರು ಮ್ಯಾಪಿಂಗ್ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ತಿಳಿಸಿದರು.
ಪರಿಷ್ಕರಣೆ ಪ್ರಕ್ರಿಯೆ, ನಮೂನೆಗಳು ಹಾಗೂ ವೇಳಾಪಟ್ಟಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಜಾಲತಾಣ ಹಾಗೂ ಭಾರತದ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ. ಇದ್ದರು.
ದಾಖಲೆ ಸಲ್ಲಿಕೆ ಕಡ್ಡಾಯ: ಡಿಸಿ ದರ್ಶನ್
ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ವಿವಿಧ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಸಂಸ್ಥೆಗಳ ಗುರುತಿನ ಚೀಟಿ, ಪಿಂಚಣಿ ಆದೇಶ, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಶೈಕ್ಷಣಿಕ ಪ್ರಮಾಣಪತ್ರ, ಖಾಯಂ ನಿವಾಸ ಪ್ರಮಾಣಪತ್ರ, ಅರಣ್ಯ ಹಕ್ಕು ಪತ್ರ, ಜಾತಿ ಪ್ರಮಾಣಪತ್ರ, ರಾಷ್ಟ್ರೀಯ ಪೌರತ್ವ ನೋಂದಣಿ ದಾಖಲೆ, ಕುಟುಂಬ ರಿಜಿಸ್ಟರ್ ಹಾಗೂ ಸರ್ಕಾರದಿಂದ ನೀಡಲಾದ ಜಮೀನು ಅಥವಾ ಮನೆ ಹಂಚಿಕೆ ದಾಖಲೆಗಳನ್ನು ಮಾನ್ಯ ದಾಖಲೆಗಳಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ಅವರು ತಿಳಿಸಿದರು.
What do you feel about this post?
Like
Love
Happy
Haha
Sad
