ಮಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಭಾಗವಾಗಿ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16,46,387 ಮತದಾರರ ಹೆಸರುಗಳು ದಾಖಲಾಗಿವೆ. ಕರಡು ಪಟ್ಟಿಯಿಂದ ಹೊರಗುಳಿದಿರುವ 1,50,153 ಮತದಾರರಿಗೆ ಆ.24 ರಿಂದ ಸೆ.23ರೊಳಗೆ ಬಿಎಲ್‌ಒಗಳ ಮೂಲಕ ನೋಟಿಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಸೋಮವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಮ್ಯಾಪಿಂಗ್ ಆಗದಿರುವುದು, ಹೆಸರು ಅಥವಾ ಪೋಷಕರ ಹೆಸರಿನಲ್ಲಿ ಬದಲಾವಣೆ, ವಯಸ್ಸಿನ ಅಂತರ ಸೇರಿದಂತೆ ವಿವಿಧ ಕಾರಣಗಳಿಂದ ಕರಡು ಮತದಾರರ ಪಟ್ಟಿಯಿಂದ ಹೆಸರು ಹೊರಗುಳಿದಿರುವವರಿಗೆ ನೋಸು ನೀಡಲಾಗುವುದು ಎಂದರು.
ನೋಟೀಸಿನಲ್ಲಿ ವಿಚಾರಣೆಯ ದಿನಾಂಕ, ಸಮಯ ಮತ್ತು ಸ್ಥಳದ ವಿವರಗಳನ್ನು ನಮೂದಿಸಲಾಗುತ್ತದೆ. ಬಿಎಲ್‌ಒಗಳು ನಿಗದಿತ ಅವಧಿಯಲ್ಲಿ ನೋಟೀಸನ್ನು ಮತದಾರರ ಮನೆಗಳಿಗೆ ತಲುಪಿಸಲಿದ್ದಾರೆ. ನಿಗದಿತ ಅವಧಿಯಲ್ಲಿ ಲಿಖಿತ ಮನವಿಯೊಂದಿಗೆ ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿ ಮುಂದೆ ಹಾಜರಾಗಲು ಸಾಧ್ಯವಾಗದವರಿಗೆ ಮತ್ತೊಂದು ಅವಕಾಶ ನೀಡಲಾಗುವುದು. ಈ ಅವಕಾಶವನ್ನೂ ಬಳಸಿಕೊಳ್ಳದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗುವುದು ಎಂದರು.
ವಿಚಾರಣೆಗೆ ಹಾಜರಾಗುವ ವೇಳೆ ಮತದಾರರು ಅಗತ್ಯ ವಿವರಗಳನ್ನು ನಮೂನೆಯಲ್ಲಿ ಭರ್ತಿ ಮಾಡಿಕೊಂಡು ಬರಬೇಕು. ದಾಖಲೆಗಳನ್ನು ಆನ್‌ಲೈನ್‌ನಲ್ಲಿಯೂ ಅಪ್‌ಲೋಡ್ ಮಾಡಬಹುದಾಗಿದೆ. ಆದರೆ ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿ ಎದುರು ಭೌತಿಕವಾಗಿ ಹಾಜರಾಗುವುದು ಕಡ್ಡಾಯ ಎಂದರು.
ಯಾರಿಗೆ ಯಾವ ದಾಖಲೆ?
1987ರ ಜುಲೈ 1ಕ್ಕಿಂತ ಮೊದಲು ಜನಿಸಿದವರು ತಮ್ಮ ಜನ್ಮ ದಿನಾಂಕ ಅಥವಾ ಜನ್ಮಸ್ಥಳವನ್ನು ದೃಢೀಕರಿಸುವ ದಾಖಲೆ ಸಲ್ಲಿಸಬೇಕು. 1987ರ ಜುಲೈ 1ರಿಂದ 2004ರ ಡಿಸೆಂಬರ್ 2ರೊಳಗೆ ಜನಿಸಿದವರು ತಮ್ಮ ಜನ್ಮ ದಿನಾಂಕ ಅಥವಾ ಜನ್ಮಸ್ಥಳವನ್ನು ದೃಢೀಕರಿಸುವ ದಾಖಲೆ ಜತೆಗೆ ತಂದೆ ಅಥವಾ ತಾಯಿಯ ಜನ್ಮ ದಿನಾಂಕ ಅಥವಾ ಜನ್ಮಸ್ಥಳವನ್ನು ದೃಢೀಕರಿಸುವ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.
2026ರ ಜೂನ್ 16ರಂತೆ ಜಿಲ್ಲೆಯಲ್ಲಿದ್ದ ಮತದಾರರು: 18,03,766, ಹಂಚಿಕೆ ಮಾಡಲಾದ ಎನುಮರೇಶನ್ ಫಾರಂಗಳು: 18,03,766, ಡಿಜಿಟೈಸ್ ಮಾಡಿದ ಎನುಮರೇಶನ್ ಫಾರಂಗಳು: 16,46,387 (ಶೇ.91.27), ಎಎಸ್‌ಡಿಡಿ ಎಂದು ಗುರುತಿಸಿರುವವರು: 1,57,379 (ಶೇ.8.73), ಗೈರು ಮತದಾರರು: 11,124 (ಶೇ.0.62), ಶಾಶ್ವತವಾಗಿ ವಲಸೆ ಹೋದವರು: 82,988 (ಶೇ.4.60), ಮೃತಪಟ್ಟಿರುವ ಮತದಾರರು: 45,318 (ಶೇ.2.51)
ಬೇರೆಡೆ ಮತಪಟ್ಟಿಯಲ್ಲಿ ಹೆಸರು ಹೊಂದಿರುವವರು: 15,395 (ಶೇ.0.85) ಇತರೆ: 2,554 (ಶೇ.0.14) ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ., ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಡಾ. ಸಂತೋಷ್ ಕುಮಾರ್, ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಅಕ್ಷತಾ ಇದ್ದರು.
ಸಹಾಯಕ ನೋಂದಣಾಧಿಕಾರಿಗಳಿಗೆ ಪ್ರಸ್ತಾವ
ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಸದ್ಯ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಎಸ್‌ಐಆರ್ ಪ್ರಕ್ರಿಯೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 154 ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸುವಂತೆ ಚುನಾವಣಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಒಂದೆರಡು ದಿನಗಳಲ್ಲಿ ಅನುಮತಿ ದೊರೆಯುವ ನಿರೀಕ್ಷೆಯಿದೆ ಎಂದು ದರ್ಶನ್ ಎಚ್.ವಿ. ತಿಳಿಸಿದರು.
What do you feel about this post?
Like
Love
Happy
Haha
Sad





