ಮೂಡುಬಿದಿರೆ: ಜಿಲ್ಲಾ ಮಟ್ಟದ 14 ಹಾಗೂ 17 ವರ್ಷ ವಯೋಮಿತಿಯ ಈಜು ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು 12 ಪದಕಗಳನ್ನು ಗೆದ್ದು ಗಮನ ಸೆಳೆದಿದ್ದು, ನಾಲ್ವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ (ಆಡಳಿತ), ಮಂಗಳೂರು ಹಾಗೂ ಬ್ಯಾರೀಸ್ ಪಬ್ಲಿಕ್ ಸ್ಕೂಲ್, ಲೇಡಿಹಿಲ್, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಈಜು ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು ಮೂರು ಚಿನ್ನ, ಆರು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಪಡೆದುಕೊಂಡರು.
14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಪ್ರೀತಿ 400 ಮೀಟರ್ ಫ್ರೀಸ್ಟೈಲ್‌ನಲ್ಲಿ ಪ್ರಥಮ, 200 ಮೀಟರ್ ವೈಯಕ್ತಿಕ ಮೆಡ್ಲೆಯಲ್ಲಿ ದ್ವಿತೀಯ ಹಾಗೂ 50 ಮೀಟರ್ ಫ್ರೀಸ್ಟೈಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದರು.
17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಅಭಿಷೇಕ್ 200 ಮೀಟರ್ ಫ್ರೀಸ್ಟೈಲ್ ಹಾಗೂ 400 ಮೀಟರ್ ವೈಯಕ್ತಿಕ ಮೆಡ್ಲೆಯಲ್ಲಿ ಪ್ರಥಮ ಸ್ಥಾನ, 50 ಮೀಟರ್ ಬಟರ್‌ಫ್ಲೈನಲ್ಲಿ ದ್ವಿತೀಯ ಸ್ಥಾನ ಪಡೆದರು.
ದುರ್ಗೇಶ್ 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಹಾಗೂ 50 ಮೀಟರ್ ಫ್ರೀಸ್ಟೈಲ್‌ನಲ್ಲಿ ತೃತೀಯ, 200 ಮೀಟರ್ ವೈಯಕ್ತಿಕ ಮೆಡ್ಲೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದರು. ರಿತ್ವಿಜ್ 100 ಮೀಟರ್ ಫ್ರೀಸ್ಟೈಲ್ ಹಾಗೂ 50 ಮೀಟರ್ ಫ್ರೀಸ್ಟೈಲ್‌ನಲ್ಲಿ ದ್ವಿತೀಯ, 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ತೃತೀಯ ಸ್ಥಾನ ಪಡೆದರು.
ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ನಾಲ್ವರು ವಿದ್ಯಾರ್ಥಿಗಳು ಬೆಂಗಳೂರಿನ ಬಸವನಗುಡಿ ಈಜುಕೊಳದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.
What do you feel about this post?
Like
Love
Happy
Haha
Sad





