ಮಂಗಳೂರು: ದ. ಕ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಶಾಲೆಗಳಿಗೆ ಘೋಷಿಸಿದ್ದ ಮಳೆ ರಜೆಗಳಿಂದ ಉಂಟಾಗಿರುವ ಬೋಧನಾ ಅವಧಿಯ ಕೊರತೆಯನ್ನು ಸರಿದೂಗಿಸಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯು ಅಧಿಕೃತ ಆದೇಶ ಹಾಗೂ ತಿದ್ದುಪಡಿ ಜ್ಞಾಪನ ಹೊರಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ ಹಾಗೂ ಮೂಡುಬಿದಿರೆ: ಒಟ್ಟು 8 ಪೂರ್ಣ ದಿನಗಳು ಹಾಗೂ 1 ಅರ್ಧ ದಿನದ ರಜೆ ಘೋಷಿಸಲಾಗಿತ್ತು. ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ: ಒಟ್ಟು 9 ಪೂರ್ಣ ದಿನಗಳ ರಜೆ ನೀಡಲಾಗಿತ್ತು.
ಸೆಪ್ಟೆಂಬರ್ 2026 ರ 2ನೇ ಶನಿವಾರದಿಂದ ಹೆಚ್ಚುವರಿ ಬೋಧನಾ ಅವಧಿಗಳನ್ನು ಕಡ್ಡಾಯವಾಗಿ ನಡೆಸಲು ಆದೇಶಿಸಲಾಗಿದೆ. ಶನಿವಾರ ಪೂರ್ಣ ದಿನ ಶಾಲೆ: ಶನಿವಾರದಂದು ಅಪರಾಹ್ನ ಪೂರ್ಣಾವಧಿ ತರಗತಿಗಳನ್ನು ನಡೆಸುವುದು. ಸಂಜೆ ಹೆಚ್ಚುವರಿ ತರಗತಿ: ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಇತರ ದಿನಗಳಲ್ಲಿ ಸಂಜೆಯ ವೇಳೆ ಒಂದು ಹೆಚ್ಚುವರಿ ಬೋಧನಾ ಅವಧಿಯನ್ನು ನಡೆಸಿ ಪಠ್ಯ ಪೂರ್ಣಗೊಳಿಸುವುದು ಎಂದು ತಿಳಿಸಿದ್ದಾರೆ.
ಪ್ರತಿ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ಸಭೆ ನಡೆಸಿ, ಶಾಲಾವಾರು ನಷ್ಟವಾದ ದಿನಗಳನ್ನು ಲೆಕ್ಕಹಾಕಿ, ವೇಳಾಪಟ್ಟಿಯಲ್ಲಿ ದಾಖಲಿಸಿ ಶೈಕ್ಷಣಿಕ ಮಾರ್ಗಸೂಚಿಯಂತೆ ಬೋಧನೆ ಸರಿದೂಗಿಸಲು ಸೂಚಿಸಲಾಗಿದೆ. ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ನಿರ್ದೇಶನವನ್ನು ತಮ್ಮ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಡಿಡಿಪಿಐ ನಿರ್ದೇಶನ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
What do you feel about this post?
Like
Love
Happy
Haha
Sad





