ಕಾರವಾರ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಬಳಲುತ್ತಿರುವವರನ್ನು ವ್ಯಸನದಿಂದ ಮುಕ್ತಗೊಳಿಸಲು ವಿಶೇಷ ಶಿಬಿರಗಳನ್ನು ಆಯೋಜಿಸಿ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್‌ಕಾರ್ಡ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾದಕ ವಸ್ತು ಸೇವನೆ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾದವರು ಮತ್ತೆ ವ್ಯಸನಕ್ಕೆ ಒಳಗಾಗದಂತೆ ಅರಿವು ಮೂಡಿಸಬೇಕು. ಅವರಿಗಾಗಿ ವ್ಯಸನ ಮುಕ್ತ ಶಿಬಿರಗಳನ್ನು ಆಯೋಜಿಸಿ ಅಗತ್ಯ ಚಿಕಿತ್ಸೆ ನೀಡಬೇಕು. ಈ ಕಾರ್ಯದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆಯ ಸಹಕಾರ ಪಡೆಯಬೇಕು ಎಂದು ಸೂಚಿಸಿದರು.
ಜಿಲ್ಲೆಯ ಎಲ್ಲ ಶಾಲಾ–ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಸಂಖ್ಯೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹೋಂಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ನಿಯಮಿತವಾಗಿ ತಪಾಸಣೆ ನಡೆಸಬೇಕು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸರಬರಾಜು, ಮಾರಾಟ ಮತ್ತು ಬಳಕೆ ತಡೆಗೆ ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ. ದೊಡ್ಡ ಪ್ರಮಾಣದ ಮಾದಕ ವಸ್ತು ಬಳಕೆ ಕಂಡುಬಂದಿಲ್ಲ. ಆದರೆ ಪ್ರವಾಸ ಹಾಗೂ ಇತರ ಕಾರಣಗಳಿಂದ ಜಿಲ್ಲೆಗೆ ಆಗಮಿಸುವವರಲ್ಲಿ ಮಾದಕ ವಸ್ತುಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ತಿಳಿಸಿದರು.
‘ಬೇಡ ಬ್ರೋ’ ಹಾಗೂ ‘ರೈಸ್’ ಕಾರ್ಯಕ್ರಮಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ಆಂಟಿ ಡ್ರಗ್ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೀಜ್‌ಗೆ ಸಂಬಂಧಿಸಿದ ಐದು ಪ್ರಕರಣಗಳಲ್ಲಿ 11 ಮಂದಿಯನ್ನು ಬಂಧಿಸಿ, ₹1.77 ಲಕ್ಷ ಮೌಲ್ಯದ 5.555 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತು ಸೇವನೆಗೆ ಸಂಬಂಧಿಸಿದ 65 ಪ್ರಕರಣಗಳಲ್ಲಿ 70 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟ ಸಂಪೂರ್ಣ ತಡೆಗೆ ಪೊಲೀಸ್, ಅಬಕಾರಿ, ಅರಣ್ಯ, ಮೀನುಗಾರಿಕೆ, ಬಂದರು, ಅಂಚೆ, ಕರಾವಳಿ ಕಾವಲು ಪಡೆ, ಆರೋಗ್ಯ ಹಾಗೂ ಶಿಕ್ಷಣ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಅಬಕಾರಿ ಇಲಾಖೆ ಡಿ.ಸಿ. ಅಮಾನುಲ್ಲಾಖಾನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
What do you feel about this post?
Like
Love
Happy
Haha
Sad





