ಮೂಡುಬಿದಿರೆ: ವಿದ್ಯಾರ್ಥಿಗಳು ಮಾದಕ ವ್ಯಸನದಂತಹ ದುಶ್ಚಟಗಳಿಂದ ದೂರವಿದ್ದು, ಉತ್ತಮ ಮೌಲ್ಯಗಳೊಂದಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಮೂಡುಬಿದಿರೆ ಇನ್ ಸ್ಪೆಕ್ಟರ್ ರಾಜೇಂದ್ರ ಬಿ. ಅವರು ಹೇಳಿದರು.
ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಮಾದಕ ವಸ್ತುಗಳ ದುಷ್ಪರಿಣಾಮದಿಂದ ದೂರವಿರಿಸಿ ಆರೋಗ್ಯವಂತ ಹಾಗೂ ಮೌಲ್ಯಾಧಾರಿತ ಬದುಕಿನತ್ತ ಪ್ರೇರೇಪಿಸುವ ಉದ್ದೇಶದಿಂದ ಆಯೋಜಿಸಿದ್ದ ಮಾದಕ ವಸ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯ ಬದುಕು ಮಾತ್ರವಲ್ಲದೆ ಕುಟುಂಬದ ನೆಮ್ಮದಿ ಮತ್ತು ಸಮಾಜದ ಶಾಂತಿಯನ್ನೂ ಹಾಳುಮಾಡುವ ಗಂಭೀರ ಪಿಡುಗಾಗಿದೆ. ಕ್ಷಣಿಕ ಕುತೂಹಲ ಅಥವಾ ಕೆಟ್ಟ ಸ್ನೇಹದಿಂದ ಆರಂಭವಾಗುವ ದುಶ್ಚಟ ಇಡೀ ಜೀವನದ ದಿಕ್ಕನ್ನೇ ಬದಲಾಯಿಸಬಹುದು. ವಿದ್ಯಾರ್ಥಿಗಳು ಕಾನೂನಿನ ಅರಿವು, ಆತ್ಮಸಂಯಮ ಹಾಗೂ ಉತ್ತಮ ಜೀವನ ಮೌಲ್ಯಗಳನ್ನು ರೂಢಿಸಿಕೊಂಡು ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಭಾಗಿಯಾಗಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮುಲ್ಕಿ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ನಾಯಕ್, ಯುವಜನರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳ ಜಾಲ ವಿಸ್ತರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಜಾಗೃತ ಮನೋಭಾವ ಬೆಳೆಸಿಕೊಂಡು ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ನಿರ್ಭಯವಾಗಿ ಮಾಹಿತಿ ನೀಡುವ ಜವಾಬ್ದಾರಿಯುತ ನಾಗರಿಕನಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಶಿಕ್ಷಣವು ಕೇವಲ ಶೈಕ್ಷಣಿಕ ಸಾಧನೆಗೆ ಸೀಮಿತವಲ್ಲ. ಉತ್ತಮ ವ್ಯಕ್ತಿತ್ವ, ಸಾಮಾಜಿಕ ಬದ್ಧತೆ ಹಾಗೂ ರಾಷ್ಟ್ರಪ್ರಜ್ಞೆಯುಳ್ಳ ಯುವಜನರನ್ನು ರೂಪಿಸುವುದೇ ಶಿಕ್ಷಣದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ವೃತ್ತಿ ಮಾರ್ಗದರ್ಶನ ತಜ್ಞ ವಿವೇಕ್ ಭಂಡಾರಿ ಹಾಗೂ ಪ್ರಾಂಶುಪಾಲ ಪುಷ್ಪರಾಜ್ ಉಪಸ್ಥಿತರಿದ್ದರು. ಉಪನ್ಯಾಸಕಿ ಮಂಜುಶ್ರೀ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರೆ, ಉಪನ್ಯಾಸಕಿ ಪ್ರಿಯಾಂಕ ವಂದಿಸಿದರು.
What do you feel about this post?
Like
Love
Happy
Haha
Sad





