ಕಾರವಾರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಯಶಸ್ಸಿಗೆ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರಂ ವಿತರಣೆ ಹಾಗೂ ಸಂಗ್ರಹ ಕಾರ್ಯ ನಡೆಸಲಿದ್ದಾರೆ ಎಂದು ಹೇಳಿದರು. ಬಿಎಲ್‌ಓಗಳು ನೀಡುವ ಫಾರಂಗಳನ್ನು ಮತದಾರರು ಸರಿಯಾಗಿ ಭರ್ತಿ ಮಾಡಿ ಹಿಂತಿರುಗಿಸುವುದು ಕಡ್ಡಾಯವಾಗಿದ್ದು, ಇಲ್ಲದಿದ್ದರೆ ಕರಡು ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದಿಲ್ಲ ಎಂದರು.
ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರು ಇದ್ದು, ಶೇ.93.47ರಷ್ಟು ಮತದಾರರ ವಿವರಗಳ ಮ್ಯಾಪಿಂಗ್ ಪೂರ್ಣಗೊಂಡಿದೆ. 1,445 ಬಿಎಲ್‌ಓಗಳು ಹಾಗೂ 144 ಸೂಪರ್ ವೈಸರ್‌ಗಳನ್ನು ನಿಯೋಜಿಸಲಾಗಿದೆ. ರಾಜಕೀಯ ಪಕ್ಷಗಳಿಂದ 2,822 ಬೂತ್ ಲೆವೆಲ್ ಏಜೆಂಟರನ್ನು ನೇಮಿಸಲಾಗಿದೆ ಎಂದರು.
ಎನ್ಯುಮರೇಷನ್ ಫಾರಂಗೆ ಬಿಎಲ್‌ಓ ಹಾಗೂ ಮತದಾರರ ಸಹಿ ಹಾಗೂ ಇತ್ತೀಚಿನ ಭಾವಚಿತ್ರ ಕಡ್ಡಾಯವಾಗಿದ್ದು, ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲ ಎಂದು ತಿಳಿಸಿದರು. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಕೈಬಿಡದಂತೆ ವಿಶೇಷ ಗಮನ ವಹಿಸಲಾಗುವುದು ಎಂದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮಾತನಾಡಿ, ಬಿಎಲ್‌ಓಗಳಿಗೆ ಸೂಕ್ತ ತರಬೇತಿ ನೀಡಬೇಕು, ಅನಕ್ಷರಸ್ಥರು, ಕಾರ್ಮಿಕರು ಹಾಗೂ ಸ್ಲಮ್ ಪ್ರದೇಶಗಳ ಜನರಿಗೆ ವಿಶೇಷ ಜಾಗೃತಿ ಮೂಡಿಸಬೇಕು ಹಾಗೂ ಕುಟುಂಬ ಸದಸ್ಯರು ಒಂದೇ ಮತಗಟ್ಟೆಯಲ್ಲಿ ಮತಚಲಾಯಿಸಲು ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ವಿವಿಧ ಪಕ್ಷಗಳ ಪ್ರತಿನಿಧಿಗಳು ಇದ್ದರು.
What do you feel about this post?
Like
Love
Happy
Haha
Sad
