ಮಂಗಳೂರು: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಉರ್ವ ಗಣಪತಿ ದೇವಸ್ಥಾನ ರಸ್ತೆಯ ಉರ್ವಸ್ಟೋರ್‌ನಲ್ಲಿರುವ ಮಂಗಳೂರು ಕೇಂದ್ರದಲ್ಲಿ ‘ಶ್ರೀಕೃಷ್ಣ ವೇಷ ಸ್ಪರ್ಧೆ’ ಆಯೋಜಿಸಲಾಯಿತು.
ಮಕ್ಕಳಲ್ಲಿ ಶ್ರೀಕೃಷ್ಣನ ಜೀವನಮೌಲ್ಯಗಳು, ಸತ್ಯ, ಪ್ರೀತಿ, ಪಾವಿತ್ರ್ಯ, ಧೈರ್ಯ, ಕರುಣೆ ಸೇರಿದಂತೆ ಸದ್ಗುಣಗಳನ್ನು ಬೆಳೆಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿತ್ತು. ಮಕ್ಕಳು ಶ್ರೀಕೃಷ್ಣನ ವಿವಿಧ ರೂಪಗಳಲ್ಲಿ ವೇಷಧರಿಸಿ ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಪ್ರದರ್ಶಿಸಿದರು.
ಸ್ಪರ್ಧೆಯನ್ನು ‘ಮುದ್ದು ಕೃಷ್ಣ’ (2ರಿಂದ 4 ವರ್ಷ), ‘ಬಾಲ ಕೃಷ್ಣ’ (5ರಿಂದ 7 ವರ್ಷ) ಹಾಗೂ ‘ಕಿಶೋರ ಕೃಷ್ಣ’ (8ರಿಂದ 10 ವರ್ಷ) ಎಂಬ ಮೂರು ವಿಭಾಗಗಳಲ್ಲಿ ನಡೆಸಲಾಯಿತು.
ಮಕ್ಕಳ ವೇಷಭೂಷಣ, ಅಲಂಕಾರ, ಶ್ರೀಕೃಷ್ಣನ ಪಾತ್ರದ ಅಭಿವ್ಯಕ್ತಿ, ಆತ್ಮವಿಶ್ವಾಸ, ವೇದಿಕೆಯ ಮೇಲಿನ ನಿರ್ವಹಣೆ ಹಾಗೂ ಕೃಷ್ಣನ ಗುಣಗಳನ್ನು ಪ್ರತಿಬಿಂಬಿಸುವ ರೀತಿಯನ್ನು ಪರಿಗಣಿಸಿ ವಿಜೇತರನ್ನು ಆಯ್ಕೆ ಮಾಡಲಾಯಿತು. ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ನಕುಲ ಕೃಷ್ಣ ದಾಸ್, ಶ್ರೀಮತಿ ಇಂದಿರಾಕ್ಷಿ ಐ. ಶೆಟ್ಟಿ, ಶ್ರೀಮತಿ ನಳಿನಿ ಶೆಟ್ಟಿ, ಯೋಗೇಶ್ ಪೂಜಾರಿ ಸೇರಿದಂತೆ ಗಣ್ಯರು ಇದ್ದರು.

