ಮಂಗಳೂರು: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆಯನ್ನು ಗುರುತಿಸಿ ಹೊಸ ದಿಗಂತ ಪತ್ರಿಕೆಯ ಮಂಗಳೂರು ಆವೃತ್ತಿಯ ಪ್ರಧಾನ ವರದಿಗಾರ ಸುರೇಶ್ ಡಿ. ಪಳ್ಳಿ ಅವರನ್ನು ಪ್ರತಿಷ್ಠಿತ ‘ನಾರದ ಪುರಸ್ಕಾರ’ಕ್ಕೆ ಆಯ್ಕೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಮಹರ್ಷಿ ನಾರದರ ಸಂಸ್ಮರಣಾರ್ಥ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಅ. 4 ರಂದು ಸಂಜೆ 4 ಗಂಟೆಗೆ ಕಾರಣಗಿರಿಯ ಸಿದ್ಧಿವಿನಾಯಕ ಸಭಾಭವನದಲ್ಲಿ ನಡೆಯಲಿದೆ. ಕಲಾದರ್ಶನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಗ್ರ ಕರ್ನಾಟಕ ಪ್ರಾಂತದ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಗ್ರಾಮ ಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಸೇರಿದಂತೆ ಗಣ್ಯರು ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಒಟ್ಟು ಒಂಬತ್ತು ಮಂದಿ ಪತ್ರಕರ್ತರಿಗೆ ‘ನಾರದ ಪುರಸ್ಕಾರ’ ಪ್ರದಾನ ಮಾಡಲಾಗುತ್ತದೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿರುವ ಸುರೇಶ್ ಡಿ. ಪಳ್ಳಿ ಅವರು ಕಳೆದ 19 ವರ್ಷಗಳಿಂದ ಹೊಸ ದಿಗಂತ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2013ರಲ್ಲಿ ಅತ್ಯುತ್ತಮ ಗ್ರಾಮೀಣ ವರದಿಗಾಗಿ ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ (ಪ.ಗೋ ಪ್ರಶಸ್ತಿ) ಹಾಗೂ 2023ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಮಾಜದಲ್ಲಿ ಸೌಹಾರ್ದತೆ ಪ್ರತಿಬಿಂಬಿಸುವ ವಿಶೇಷ ವರದಿಗಾಗಿ ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ಪತ್ರಿಕೋದ್ಯಮ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಇದೀಗ ‘ನಾರದ ಪುರಸ್ಕಾರ’ ನೀಡಿ ಗೌರವಿಸಲಾಗುತ್ತಿದೆ.
What do you feel about this post?
Like
Love
Happy
Haha
Sad





