ಮಂಗಳೂರು: ವಿಧಾನಸಭೆ ಹಾಗೂ ವಿಧಾನ ಪರಿಷತ್ ಅಧಿವೇಶನಕ್ಕೆ ಅಡ್ಡಿಪಡಿಸುವ ಮೂಲಕ ಬಿಜೆಪಿ ಜನರಿಗೆ ಸಾಮಾಜಿಕ ವಂಚನೆ ಮಾಡುತ್ತಿದೆ. ಅಧಿವೇಶನಕ್ಕೆ ಅಡ್ಡಿಪಡಿಸುವುದರ ಹಿಂದೆ ‘ಹಿಡನ್ ಅಜೆಂಡಾ’ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಶನಿವಾರ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದರು.
ರಾಜ್ಯದಲ್ಲಿ ಬರ ಹಾಗೂ ಅತಿವೃಷ್ಟಿಯಂತಹ ಹಲವು ಸಮಸ್ಯೆಗಳಿವೆ. ಇವುಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾದ ವೇದಿಕೆಯಾದ ವಿಧಾನಮಂಡಲದ ಅಧಿವೇಶನಕ್ಕೆ ಅಡ್ಡಿಪಡಿಸುವುದನ್ನು ಜನತೆ ಕ್ಷಮಿಸುವುದಿಲ್ಲ ಎಂದರು.
ಸಚಿವ ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿರುವ ಬಗ್ಗೆ ಪ್ರತಿಪಕ್ಷಕ್ಕೆ ಆಕ್ಷೇಪವಿದ್ದರೆ, ನೋಟಿಸ್ ನೀಡಿ ಸದನದಲ್ಲಿ ಚರ್ಚೆಗೆ ಅವಕಾಶ ಕೋರಬೇಕಿತ್ತು. ಅಧಿವೇಶನದ ಹೊರಗಡೆ ಈ ವಿಚಾರವಾಗಿ ರಾಜಕೀಯ ಮಾಡುವುದಕ್ಕೆ ಆಕ್ಷೇಪವಿಲ್ಲ. ಆದರೆ, ಜನರ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕಾದ ಸದನಕ್ಕೆ ಅಡ್ಡಿಪಡಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ನಾಗೇಂದ್ರ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿ ಈಗಾಗಲೇ ತನಿಖೆ ನಡೆಸಿದ ಸಂಸ್ಥೆ ಕ್ಲೀನ್‌ಚಿಟ್ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಲಾಗಿದೆ. ಅದಕ್ಕೆ ಅವಕಾಶವೇ ಇಲ್ಲದಿದ್ದರೆ ರಾಜ್ಯಪಾಲರು ಪ್ರಮಾಣವಚನ ಬೋಧಿಸುತ್ತಿದ್ದರೇ? ರಾಜ್ಯಪಾಲರಿಗೆ ಕಾನೂನಿನ ಅರಿವಿಲ್ಲವೇ ಅಥವಾ ಅವರಲ್ಲಿ ಕಾನೂನು ತಂಡ ಇಲ್ಲವೇ ಎಂದರು.
ಆರೋಪ ಕೇಳಿಬಂದ ತಕ್ಷಣ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸುಮಾರು ಒಂದೂವರೆ ವರ್ಷ ಸಂಪುಟದಿಂದ ಹೊರಗಿದ್ದರು. ವಂಚನೆಯಾಗಿದ್ದ 180 ಕೋಟಿ ಪೈಕಿ ಶೇ 99.5ರಷ್ಟು ಹಣ ಸರ್ಕಾರಕ್ಕೆ ವಾಪಸ್ ಬಂದಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಿಬಿಐ ನೋಟಿಸ್ ನೀಡಿದೆ ಎಂಬ ಮಾತ್ರಕ್ಕೆ ಯಾರನ್ನೂ ತಪ್ಪಿತಸ್ಥರೆಂದು ಪರಿಗಣಿಸಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಯಬೇಕು. ಸಿಬಿಐ ನೋಟಿಸ್ ನೀಡಿದ ತಕ್ಷಣ ರಾಜೀನಾಮೆ ನೀಡಬೇಕೆಂದಾದರೆ, ಬಿಜೆಪಿಯ ಹಲವು ಮುಖ್ಯಮಂತ್ರಿ ಹಾಗೂ ಸಚಿವರೂ ತನಿಖೆ ಎದುರಿಸುತ್ತಿದ್ದಾರೆ. ಅವರ ರಾಜೀನಾಮೆಗೂ ಒತ್ತಾಯಿಸುತ್ತಾರೆಯೇ? ಬಿಜೆಪಿಗೆ ಒಂದು ನ್ಯಾಯ, ನಾಗೇಂದ್ರ ಅವರಿಗೆ ಮತ್ತೊಂದು ನ್ಯಾಯವೇ ಎಂದು ಯು.ಟಿ. ಖಾದರ್ ಪ್ರಶ್ನಿಸಿದರು.
ಅಧಿವೇಶನದ ಹೊರಗಡೆ ಪ್ರತಿಪಕ್ಷ ಪಾದಯಾತ್ರೆ ಸೇರಿದಂತೆ ಯಾವುದೇ ರೀತಿಯ ರಾಜಕೀಯ ನಡೆಸುವುದಕ್ಕೆ ಯಾರೂ ಆಕ್ಷೇಪಿಸುವುದಿಲ್ಲ. ಆದರೆ ಜನರ ಸಮಸ್ಯೆಗಳ ಚರ್ಚೆಗೆ ಮೀಸಲಾದ ಅಧಿವೇಶನಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಸಂಸತ್ತಿನಲ್ಲಿ ಪ್ರತಿಪಕ್ಷಗಳು ವಿವಿಧ ವಿಚಾರಗಳ ಕುರಿತು ಪ್ರತಿಭಟನೆ ನಡೆಸಿದ್ದಕ್ಕೆ ಪ್ರತಿಯಾಗಿ ರಾಜ್ಯದಲ್ಲಿ ಅಧಿವೇಶನಕ್ಕೆ ಅಡ್ಡಿಪಡಿಸಲಾಗುತ್ತಿದೆಯೇ ಎಂಬುದನ್ನು ಬಿಜೆಪಿಯವರು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು.
What do you feel about this post?
Like
Love
Happy
Haha
Sad





