ವಿದ್ಯಾರ್ಥಿ–ಶಿಕ್ಷಕ–ಪಾಲಕರ ಸಮನ್ವಯದಿಂದ ಉತ್ತಮ ಫಲಿತಾಂಶ: ಮೋಹನ್ ಆಳ್ವ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮೂಡುಬಿದಿರೆ: ಸಂಗೀತದಲ್ಲಿ ಶ್ರುತಿ ತಪ್ಪಿದರೆ ಸುಮಧುರ ಗಾಯನವೂ ಅಪಸ್ವರವಾಗುತ್ತದೆ. ಅದೇ ರೀತಿ ವಿದ್ಯಾರ್ಥಿ ಜೀವನಕ್ಕೂ ಸರಿಯಾದ ಶ್ರುತಿ, ಲಯ ಮತ್ತು ದಿಕ್ಕು ಅಗತ್ಯ. ಜ್ಞಾನ, ಶಿಸ್ತು, ಮೌಲ್ಯ ಹಾಗೂ ಗುರಿಯೊಂದಿಗೆ ವಿದ್ಯಾರ್ಥಿಗಳ ಬದುಕನ್ನು ಶ್ರುತಿಬದ್ಧಗೊಳಿಸುವುದೇ ನಿಜವಾದ ಶಿಕ್ಷಣ. ಈ ಕಾರ್ಯದಲ್ಲಿ ಶಿಕ್ಷಣ ಸಂಸ್ಥೆಯ ಜತೆಗೆ ಪಾಲಕರ ಪಾತ್ರವೂ ಅತ್ಯಂತ ಮಹತ್ವದ್ದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.

<

ಆಳ್ವಾಸ್‌ನ ಕೃಷಿಸಿರಿ ವೇದಿಕೆಯಲ್ಲಿ ಶನಿವಾರ ನಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪಾಲಕ–ಶಿಕ್ಷಕ ಸಮಾವೇಶದಲ್ಲಿ ಅವರು ಮಾತನಾಡಿದರು.

ಪದವಿಪೂರ್ವ ಶಿಕ್ಷಣದ ಹಂತವು ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟ. ಈ ಅವಧಿಯಲ್ಲಿ ಭವಿಷ್ಯದ ಶಿಕ್ಷಣ ಹಾಗೂ ವೃತ್ತಿಜೀವನಕ್ಕೆ ವಿದ್ಯಾರ್ಥಿಗಳು ಭದ್ರ ಅಡಿಪಾಯ ಹಾಕಿಕೊಳ್ಳಬೇಕು. ವಿದ್ಯಾರ್ಥಿಗಳ ಜತೆಗೆ ಪಾಲಕರು ಕೂಡ ಶಿಕ್ಷಣ ವ್ಯವಸ್ಥೆಯನ್ನು ಅರ್ಥಮಾಡಿಕೊಂಡು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು ಎಂದರು.

ವಿದ್ಯಾರ್ಥಿ, ಶಿಕ್ಷಕ ಮತ್ತು ಪಾಲಕ ಎಂಬ ಮೂರು ಶಕ್ತಿಗಳು ಒಂದೇ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯ. ಸಂಸ್ಥೆ ಹಾಗೂ ಪಾಲಕರ ನಡುವೆ ಪರಸ್ಪರ ವಿಶ್ವಾಸ ಮತ್ತು ಸಮನ್ವಯ ಇರಬೇಕು. ಹಾಲು ಮತ್ತು ಜೇನಿನಂತೆ ಬೆರೆತು ಕಾರ್ಯನಿರ್ವಹಿಸಿದಾಗ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಸಾಧ್ಯ ಎಂದು ಹೇಳಿದರು.

‘ಮಿನಿ ಇಂಡಿಯಾ’ ಅನುಭವ

ಆಳ್ವಾಸ್ ಸಂಸ್ಥೆಯಲ್ಲಿ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದರಿಂದ ಕ್ಯಾಂಪಸ್‌ನಲ್ಲಿ ‘ಮಿನಿ ಇಂಡಿಯಾ’ದ ಅನುಭವ ದೊರೆಯುತ್ತಿದೆ. ವಿವಿಧ ರಾಜ್ಯ, ಭಾಷೆ, ಸಂಸ್ಕೃತಿ ಹಾಗೂ ಸಾಮಾಜಿಕ ಹಿನ್ನೆಲೆಯ ವಿದ್ಯಾರ್ಥಿಗಳೊಂದಿಗೆ ಬೆರೆಯುವ ಅವಕಾಶದಿಂದ ವಿಶಾಲ ದೃಷ್ಟಿಕೋನ ಮತ್ತು ಸಹಬಾಳ್ವೆಯ ಮನೋಭಾವ ಬೆಳೆಯುತ್ತದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶಿಷ್ಟ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿ ಸೂಕ್ತ ದಿಕ್ಕಿನಲ್ಲಿ ಮುನ್ನಡೆಸುವುದು ಎಲ್ಲರ ಜವಾಬ್ದಾರಿ. ಪಾಲಕರು ಮಕ್ಕಳನ್ನು ಕೇವಲ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಅಳೆಯದೆ, ಅವರ ಆಸಕ್ತಿ, ಸಾಮರ್ಥ್ಯ ಹಾಗೂ ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಕಾಲೇಜಿನ ಶೈಕ್ಷಣಿಕ ವ್ಯವಸ್ಥೆ, ವಿದ್ಯಾರ್ಥಿಗಳ ಪ್ರಗತಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ವಿದ್ಯಾರ್ಥಿ ಕಲ್ಯಾಣ ಹಾಗೂ ಪಾಲಕರು–ಶಿಕ್ಷಕರ ಸಮನ್ವಯ ಕುರಿತು ಚರ್ಚಿಸಲಾಯಿತು. ವಿಜ್ಞಾನ ವಿಭಾಗದ 2,219 ವಿದ್ಯಾರ್ಥಿಗಳ ಪಾಲಕರು ಹಾಗೂ ಬೋಧಕ ಸಿಬ್ಬಂದಿ ಭಾಗವಹಿಸಿದ್ದರು.

ಕಾಲೇಜಿನ ಪ್ರಾಚಾರ್ಯ ಮೊಹಮ್ಮದ್ ಸದಾಕತ್, ವಿವಿಧ ಶೈಕ್ಷಣಿಕ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

16 ವಿಭಾಗಗಳಲ್ಲಿ ಸಮಗ್ರ ಶಿಕ್ಷಣ

ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 16 ವಿಭಾಗಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಪಠ್ಯಕ್ರಮದ ಜತೆಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಮಗ್ರ ತರಬೇತಿ ನೀಡಲಾಗುತ್ತಿದೆ. ಎನ್‌ಸಿಇಆರ್‌ಟಿ ಪಠ್ಯಕ್ರಮದೊಂದಿಗೆ ಸಿಇಟಿ, ನೀಟ್, ನಾಟಾ, ಎನ್‌ಡಿಎ, ಸಿಎ, ಸಿಎಸ್, ಯುಪಿಎಸ್‌ಸಿ ಹಾಗೂ ಕ್ಲಾಟ್ ಸೇರಿದಂತೆ ವಿವಿಧ ಪ್ರವೇಶ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ತರಬೇತಿ ಒದಗಿಸಲಾಗುತ್ತಿದೆ.

ಪದವಿಪೂರ್ವ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕೆ ₹28.62 ಕೋಟಿ

ವಿದ್ಯಾರ್ಥಿಗಳ ಆರ್ಥಿಕ ಹಿನ್ನೆಲೆ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಆಶಯದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರತಿ ವರ್ಷ ಸುಮಾರು ₹70ರಿಂದ ₹80 ಕೋಟಿ ಮೊತ್ತವನ್ನು ವಿದ್ಯಾರ್ಥಿವೇತನ ಹಾಗೂ ಶೈಕ್ಷಣಿಕ ನೆರವಿಗಾಗಿ ವಿನಿಯೋಗಿಸುತ್ತಿದೆ. ಇದರಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ₹28.62 ಕೋಟಿಯನ್ನು ಕೇವಲ ವಿದ್ಯಾರ್ಥಿವೇತನಕ್ಕೆ ಮೀಸಲಿಡಲಾಗಿದೆ ಎಂದು ಡಾ. ಮೋಹನ್ ಆಳ್ವ ತಿಳಿಸಿದರು.

 

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *