ಬಂಟ್ವಾಳ ಬಸ್‌ ನಿಲ್ದಾಣದಲ್ಲಿ ಯುವತಿ ಅಟ್ಟಾಡಿಸಿ ಹತ್ಯೆ; ಚಿಕಿತ್ಸೆಗೆ ಸ್ಪಂದಿಸದೇ ಯುವತಿ ಸಾವು, ಆರೋಪಿ ಪತ್ತೆಗೆ ಶೋಧ

ಅಪರಾಧ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್‌ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಗುರುವಾರ ಯುವತಿಯೊಬ್ಬರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಕಕ್ಯಪದವು ನಿವಾಸಿ ಲಾವಣ್ಯ (21) ಮೃತ ಯುವತಿ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಯುವತಿ ಮೃತಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಮಾತನಾಡಿ, ಆರೋಪಿಯನ್ನು ಚೇತನ್ ಎಂದು ಗುರುತಿಸಲಾಗಿದ್ದು, ಆತ ಮೃತ ಯುವತಿಯ ದೂರದ ಸಂಬಂಧಿಯಾಗಿದ್ದು, ಆಕೆಯನ್ನು ಪ್ರೀತಿಸುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.

ಲಾವಣ್ಯ ಅವರು ಕಕ್ಯಪದವು ಕಡೆಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕುಳಿತಿದ್ದರು. ಈ ವೇಳೆ ತಮ್ಮ ಸಂಬಂಧಿಕರೊಬ್ಬರಿಗೆ ಕರೆ ಮಾಡಿ, ತಮ್ಮ ಪಕ್ಕದಲ್ಲಿ ಅಪರಿಚಿತ ಯುವಕನೊಬ್ಬ ಕುಳಿತಿದ್ದಾನೆ ಎಂದು ತಿಳಿಸಿದ್ದು, ಬಳಿಕ ಕರೆ ಸಂಪರ್ಕ ಕಡಿತಗೊಂಡಿತ್ತು.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಯುವತಿ ಬಸ್‌ನಿಂದ ಕೆಳಗಿಳಿದ ತಕ್ಷಣವೇ ಯುವಕ ಯುವತಿಯನ್ನು ಬೆನ್ನಟ್ಟಿದ್ದಾನೆ. ತನ್ನ ಬ್ಯಾಗ್‌ನಲ್ಲಿದ್ದ ಹರಿತ ಆಯುಧವನ್ನು ಹೊರತೆಗೆದಾಗ ಯುವತಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಇದೇ ವೇಳೆ ಆರೋಪಿ ಮಾರಕವಾಗಿ ಹಲ್ಲೆ ನಡೆಸಿದ್ದಾನೆ. ಬಳಿಕ ಆತ ಸ್ಥಳದಿಂದ ಪರಾರಿ ಆಗಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಘಟನೆಯಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಠಾಣೆ ಪೊಲೀಸರು ಆರೋಪಿಯ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದು, ಹತ್ಯೆಯ ನಿಖರ ಕಾರಣ ಮತ್ತು ಹಿನ್ನೆಲೆ ಕುರಿತು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *