ಬಿಜೆಪಿ ಮುಗಿಸಲು ಪಕ್ಷ ಕಟ್ಟಿದವರಿಂದ ಈಗ ‘ಪ್ರಾಯಶ್ಚಿತ್ತ ಯಾತ್ರೆ’: ಸಚಿವ ತಂಗಡಗಿ ಟೀಕೆ

ಜಿಲ್ಲಾ ಸುದ್ದಿ ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜಕೀಯ ರಾಜ್ಯ ಶಿರಸಿ

Spread the love

ಬೆಂಗಳೂರು: ಬಿಜೆಪಿ ವಿರುದ್ಧ ಪ್ರತ್ಯೇಕ ಪಕ್ಷಗಳನ್ನು ಕಟ್ಟಿದ್ದ ಬಿ.ವೈ. ವಿಜಯೇಂದ್ರ, ಗಾಲಿ ಜನಾರ್ದನ ರೆಡ್ಡಿ ಹಾಗೂ ಬಿ. ಶ್ರೀರಾಮುಲು ಅವರು ಇದೀಗ ಬಿಜೆಪಿಯ ರಕ್ಷಕರಂತೆ ಪಾದಯಾತ್ರೆ ನಡೆಸುತ್ತಿರುವುದು ರಾಜಕೀಯದ ದೊಡ್ಡ ವ್ಯಂಗ್ಯ ಎಂದು ಸಚಿವ ಶಿವರಾಜ ತಂಗಡಗಿ ಅವರು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

<

ಗೊತ್ತು–ಗುರಿ ಇಲ್ಲದೆ ಪಾದಯಾತ್ರೆ ಕೈಗೊಂಡಿರುವ ಈ ಮೂವರು ನಾಯಕರು ಹಿಂದೆ ಬಿಜೆಪಿ ವಿರುದ್ಧ ರಾಜಕೀಯ ಹೋರಾಟ ನಡೆಸಿ ವಿಫಲರಾದವರು. ಈಗ ಅವಕಾಶಕ್ಕಾಗಿ ಕಾಯುತ್ತಿದ್ದು, ಬಿಜೆಪಿಯ ಪರವಾಗಿ ಪಾದಯಾತ್ರೆ ನಡೆಸುತ್ತಿರುವುದು ‘ಪ್ರಾಯಶ್ಚಿತ್ತ ಯಾತ್ರೆ’ಯಂತಿದೆ ಎಂದು ಆರೋಪಿಸಲಾಗಿದೆ.

ಬಿಜೆಪಿ ವಿರುದ್ಧ ಉದಯಿಸಿದ ಕರ್ನಾಟಕ ಜನತಾ ಪಕ್ಷದ ಸೂತ್ರಧಾರರಾಗಿದ್ದ ಬಿ.ವೈ. ವಿಜಯೇಂದ್ರ ಈಗ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಅದೇ ರೀತಿ ಬಿಜೆಪಿ ವಿರುದ್ಧ ತೊಡೆತಟ್ಟಿ ಪ್ರತ್ಯೇಕ ಪಕ್ಷಗಳನ್ನು ಕಟ್ಟಿದ್ದ ಬಿ. ಶ್ರೀರಾಮುಲು ಹಾಗೂ ಗಾಲಿ ಜನಾರ್ದನ ರೆಡ್ಡಿ ಇದೀಗ ಬಿಜೆಪಿಯ ನಿಷ್ಠಾವಂತರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

‘ಆ ಮೂರು ಪಕ್ಷಗಳಿಗೆ ಜನಬೆಂಬಲ ದೊರೆತಿದ್ದರೆ ಮತ್ತೆ ಬಿಜೆಪಿಗೆ ಬರುತ್ತಿದ್ದಿರಾ? ಬಿಜೆಪಿ ಪರವಾಗಿದ್ದೇವೆ ಎಂದು ಹೇಳಿಕೊಂಡು ಈ ಪಾದಯಾತ್ರೆ ನಡೆಸುತ್ತಿದ್ದಿರಾ?’ ಎಂದು ಮೂರು ಮಂದಿ ನಾಯಕರ ವಿರುದ್ಧ ಆರೋಪಿಸಿದರು.

ಜನಾರ್ದನ ರೆಡ್ಡಿ ಅವರು ಪ್ರತ್ಯೇಕ ಪಕ್ಷ ಕಟ್ಟಿದ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ತಮ್ಮ ಸಹೋದರ ಸೋಮಶೇಖರ ರೆಡ್ಡಿ ವಿರುದ್ಧ ಪತ್ನಿಯನ್ನು ಕಣಕ್ಕಿಳಿಸಿ ಬಿಜೆಪಿ ಸೋಲಿಗೆ ಕಾರಣರಾಗಿದ್ದರು. ಸಿರುಗುಪ್ಪಾದಲ್ಲಿ ಸೋಮಲಿಂಗಪ್ಪ ಅವರ ರಾಜಕೀಯ ಜೀವನದೊಂದಿಗೆ ಚೆಲ್ಲಾಟವಾಡಿದವರು ಯಾರು ಎಂಬುದನ್ನು ಅವರು ನೆನಪಿಸಿಕೊಳ್ಳಬೇಕು ಎಂದರು.

ಬಿ. ಶ್ರೀರಾಮುಲು ಅವರು ರಾಹುಲ್ ಗಾಂಧಿ ವಿರುದ್ಧ ಮಾತನಾಡುವ ಮೊದಲು, ಬಡವರು, ಶ್ರಮಿಕರು ಹಾಗೂ ರೈತರ ಪರವಾಗಿ ಪಕ್ಷ ಕಟ್ಟಿಕೊಂಡು ಬಿಜೆಪಿಯ ವಿರುದ್ಧ ರಾಜಕೀಯವಾಗಿ ತೊಡೆತಟ್ಟಿದ್ದನ್ನು ನೆನಪಿಸಿಕೊಳ್ಳಬೇಕು. ‘ಬಿ.ಎಸ್.ಆರ್. ಕಾಂಗ್ರೆಸ್’ ಎಂದು ತಮ್ಮ ಪಕ್ಷಕ್ಕೆ ಹೆಸರಿಟ್ಟಿದ್ದನ್ನೂ ಮರೆಯಬಾರದು ಎಂದು ಆರೋಪಿಸಿದರು.

ಇತ್ತೀಚೆಗಷ್ಟೇ ಜನಾರ್ದನ ರೆಡ್ಡಿ ತಮ್ಮ ರಾಜಕೀಯ ಜೀವನವನ್ನು ಮುಗಿಸಲು ಹೊರಟಿದ್ದಾರೆ ಎಂದು ಪರಸ್ಪರ ಬಹಿರಂಗವಾಗಿ ಆರೋಪ–ಪ್ರತ್ಯಾರೋಪ ಮಾಡಿಕೊಂಡಿದ್ದ ನಾಯಕರು ಇದೀಗ ಬಿಜೆಪಿಯ ಬಗ್ಗೆ ಏಕಾಏಕಿ ಪ್ರೀತಿ ವ್ಯಕ್ತಪಡಿಸುತ್ತಿರುವುದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ ಎಂದರು.

ಮೂವರು ನಾಯಕರು ತಮ್ಮ ಹಾಗೂ ಕುಟುಂಬ ಸದಸ್ಯರ ಮೇಲಿರುವ ಪ್ರಕರಣಗಳಿಗೆ ಹೆದರಿ ಬಿಜೆಪಿಗೆ ಬಂದವರೇ ಹೊರತು, ಪಕ್ಷದ ಮೇಲಿನ ನಿಷ್ಠೆಯಿಂದಲ್ಲ ಎಂಬುದು ಬಿಜೆಪಿ ಕಾರ್ಯಕರ್ತರಿಗೆ ಈಗ ಅರಿವಾಗಿದೆ ಎಂದು ತಂಗಡಗಿ ಆರೋಪಿಸಿದರು.

ಇದು ಬಿಜೆಪಿ ವಿರೋಧಿಗಳ ಕೂಟದ ಪಾದಯಾತ್ರೆ ಎಂಬುದು ಸ್ಪಷ್ಟವಾಗುತ್ತಿದೆ. ಹೀಗಾಗಿಯೇ ಆರ್. ಅಶೋಕ್ ಅವರ ಅನುಪಸ್ಥಿತಿ ಹಾಗೂ ಕುಮಾರಸ್ವಾಮಿ, ಸುನಿಲ್ ಕುಮಾರ್, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಜೆ.ಸಿ. ಮಾಧುಸ್ವಾಮಿ, ಸಿ.ಟಿ. ರವಿ ಸೇರಿದಂತೆ ಪ್ರಮುಖ ನಾಯಕರು ಅಂತರ ಕಾಯ್ದುಕೊಂಡಿರುವುದು ಗಮನಾರ್ಹ ಸಂಗತಿ ಎಂದರು.

ಸ್ವಂತ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಿದ ಇತಿಹಾಸ ಹೊಂದಿರುವ ಈ ಮೂವರು ನಾಯಕರು, ಬೇರೆ ಕ್ಷೇತ್ರಗಳಿಗೆ ತೆರಳಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಾಮರ್ಥ್ಯ ಪ್ರದರ್ಶಿಸಿದ್ದಾರೆಯೇ ಎಂಬ ಪ್ರಶ್ನೆಯೂ ಮೂಡಿದೆ. ಪಾದಯಾತ್ರೆಗೆ ನಿರ್ದಿಷ್ಟ ಗುರಿ ಇಲ್ಲದೆ ದಿನಕ್ಕೊಂದು ಮಾರ್ಗದಲ್ಲಿ ಸಾಗುತ್ತಿರುವ ಮೂವರು ನಾಯಕರು ತಮ್ಮ ನಿಲುವುಗಳನ್ನು ಬದಲಿಸುತ್ತಿದ್ದಾರೆ. ಹೀಗಾಗಿ ಇದು ಬಿಜೆಪಿ ಪರವಾದ ಪಾದಯಾತ್ರೆಯೇ ಅಥವಾ ಹಳೆಯ ವೈಷಮ್ಯದಿಂದ ಬಿಜೆಪಿಯನ್ನು ಮುಗಿಸಲು ಹೊರಟ ‘ಉಪಸಂಹಾರ ಯಾತ್ರೆ’ಯೇ ಎಂಬ ಅನುಮಾನ ಸಾಮಾನ್ಯ ಜನರಲ್ಲಿ ಮೂಡಿದೆ ಎಂದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *