ಮುಂಗಾರು ವೇಳೆ, ಎಚ್ಚರಿಕೆಯಿಂದ ವಾಹನ ಚಲಾಯಿಸಿ: ದ.ಕ. ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ

ಜಿಲ್ಲಾ ಸುದ್ದಿ ಉಡುಪಿ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ
<

Spread the love

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿರುವ ಹಿನ್ನೆಲೆ ರಸ್ತೆಗಳಲ್ಲಿ ಗ್ರೀಸ್‌, ಆಯಿಲ್‌, ಡೀಸೆಲ್‌ ಸೇರಿದಂತೆ ಜಾರುವ ಪದಾರ್ಥಗಳು ಬೀಳುತ್ತಿರುವುದರಿಂದ ಅಪಘಾತಗಳ ಸಂಭವ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಬಸ್‌, ಸೇರಿದಂತೆ ಭಾರೀ ವಾಹನ ಚಾಲಕರು ಹಾಗೂ ಬೈಕ್ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ದ.ಕ. ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

<

ಮಳೆಯ ಸಂದರ್ಭ ರಸ್ತೆಗಳಲ್ಲಿ ಹೊಂಡಗಳು, ಜಾರಿ ಪ್ರದೇಶಗಳು ಹಾಗೂ ಇತರೆ ಅಡೆತಡೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಅತಿ ವೇಗ ಮತ್ತು ಅಜಾಗರೂಕತೆಯನ್ನು ತೊರೆದು ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕು ಎಂದರು.

ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರನ್ನು ಹತ್ತಿಸುವಾಗ ಮತ್ತು ಇಳಿಸುವಾಗ ಚಾಲಕರು ಹಾಗೂ ನಿರ್ವಾಹಕರು ಹೆಚ್ಚಿನ ಜಾಗ್ರತೆ ವಹಿಸಬೇಕು. ವಿದ್ಯಾರ್ಥಿಗಳ ಬಳಿ ‘ಚಲೋ ಕಾರ್ಡ್‌’ ಇದ್ದಲ್ಲಿ ಅದನ್ನು ಮಾನ್ಯಗೊಳಿಸಿ, ನಿರ್ವಾಹಕರು ಸೌಜನ್ಯದಿಂದ ವರ್ತಿಸಬೇಕು ಎಂದು ಹೇಳಿದರು. ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳೂ ಚಾಲಕ–ನಿರ್ವಾಹಕರೊಂದಿಗೆ ಸಹಕಾರದಿಂದ ನಡೆದುಕೊಳ್ಳಬೇಕು ಎಂದರು.

ಆರ್‌ಟಿಒ ನಿಗದಿಪ ಡಿಸಿರುವ ದರಕ್ಕಿಂತ ಹೆಚ್ಚು ಅಥವಾ ಕಡಿಮೆ ದರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಸರಿಯಲ್ಲ. ಸರ್ಕಾರ ಮತ್ತು ಆರ್‌ಟಿಒ ನಿಗದಿಪಡಿಸಿರುವ ದರದಲ್ಲಿಯೇ ಟಿಕೆಟ್‌ ನೀಡಬೇಕು. ಹೆಚ್ಚುವರಿ ದರ ವಸೂಲಿ ಅಥವಾ ಅನಧಿಕೃತ ರಿಯಾಯಿತಿ ನೀಡಬಾರದು ಎಂದರು.

ಖಾಸಗಿ ಸಾರಿಗೆ ಕ್ಷೇತ್ರವು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಡೀಸೆಲ್‌ ದರ ಏರಿಕೆ ಜತೆಗೆ ಟಯರ್‌, ಬಿಡಿಭಾಗಗಳು, ಆಯಿಲ್‌, ಬ್ಯಾಟರಿ, ಚಾಸಿ ಹಾಗೂ ಬಾಡಿ ಬಿಲ್ಡಿಂಗ್‌ ವೆಚ್ಚಗಳು ಶೇ 20 ರಿಂದ 30 ರವರೆಗೆ ಹೆಚ್ಚಳವಾಗಿವೆ. ಪ್ರತಿ ಮೂರು ತಿಂಗಳಿಗೆ ಸೀಟೊಂದಕ್ಕೆ 1,000 ರಂತೆ ತೆರಿಗೆ ಪಾವತಿಸಬೇಕಾಗಿದ್ದು, 50 ಸೀಟಿನ ಬಸ್‌ಗೆ 50,000 ತೆರಿಗೆ ಕಟ್ಟಬೇಕಾಗಿದೆ. ವಾರ್ಷಿಕ ವಿಮೆ ಪ್ರೀಮಿಯಂ 1 ಲಕ್ಷದಿಂದ 1.5 ಲಕ್ಷದವರೆಗೆ ತಲುಪಿದ್ದು, ಮಾಸಿಕ ಇಎಂಐ 50,000ರಿಂದ 60,000ರವರೆಗೆ ಇದೆ ಎಂದರು.

2021 ರಲ್ಲಿ ಕೊನೆಯ ಬಾರಿ ಬಸ್‌ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿತ್ತು. ಕಳೆದ ಐದು ವರ್ಷಗಳಿಂದ ದರ ಏರಿಕೆ ಮಾಡಿಲ್ಲ. ಜಾಗತಿಕ ತೈಲ ಮಾರುಕಟ್ಟೆಯ ಏರಿಳಿತದಿಂದ ಡೀಸೆಲ್‌ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಆದಾಗ್ಯೂ ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆ ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣ ಯಾವುದೇ ದರ ಏರಿಕೆ ಮಾಡುವುದಿಲ್ಲ ಎಂದರು.

ಮುಂದಿನ ಒಂದು ತಿಂಗಳ ಕಾಲ ಡೀಸೆಲ್‌ ದರ ಹಾಗೂ ಪರಿಸ್ಥಿತಿಯನ್ನು ಅವಲೋಕಿಸಿ, ಸಾರ್ವಜನಿಕರಿಗೆ ಹೊರೆಯಾಗದ ರೀತಿಯಲ್ಲಿ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ನಗರದ ಸಂಚಾರ ದಟ್ಟಣೆ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ ಅವರು, ಬಿಜೈ ಕೆಎಸ್‌ಆರ್‌ಟಿಸಿ ಜಂಕ್ಷನ್‌ನಲ್ಲಿ ಮಳೆಯ ವೇಳೆ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು. ಕೆಪಿಟಿ–ನಂತೂರು ಜಂಕ್ಷನ್‌ ಸೇರಿದಂತೆ ಕುಂಟಿಕಾನ, ಲಾಲ್‌ಬಾಗ್‌, ಪಿವಿಎಸ್‌, ಬಂಟ್ಸ್‌ ಹಾಸ್ಟೆಲ್‌ ಜಂಕ್ಷನ್‌ ಪ್ರದೇಶಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಬಸ್‌ಗಳು ವೇಳಾಪಟ್ಟಿಯಂತೆ ಸಂಚರಿಸಲು ಅಡಚಣೆ ಆಗುತ್ತಿದೆ ಎಂದರು.

ರಾಮಚಂದ್ರ ಪಿಲಾರ್, ರಾಮಚಂದ್ರ ನಾಯಕ್ ಹಾಗೂ ದಿಲ್‌ರಾಜ್‌ ಫರ್ನಾಂಡಿಸ್ ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *