ಮಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ವೈಫಲ್ಯವನ್ನು ಕೇಂದ್ರ ಸರಕಾರ ಹೊರಬೇಕಾಗಿದೆ. ಪರೀಕ್ಷೆಯ ಪಾವಿತ್ರ್ಯತೆ ಕಾಪಾಡುವಲ್ಲಿ ವಿಫಲವಾಗಿರುವ ಕೇಂದ್ರದ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ರಮಾನಾಥ ರೈ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
2020 ರಿಂದಲೂ ಹಲವು ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕಂಡಿರುವ ಬಗ್ಗೆ ಸುದ್ದಿ ಆಗಿತ್ತು. ಈ ವೇಳೆ ಈ ರೀತಿ ಆಗದಂತೆ ಕ್ರಮ ತೆಗೆದುಕೊಳ್ಳುವುದಾಗಿ ಅಗತ್ಯ ತನಿಖೆ ನಡೆಸುವ ಬಗ್ಗೆ ಕೇಂದ್ರ ಸರಕಾರ ಭರವಸೆ ನೀಡಿತ್ತು. ತನಿಖೆ ಯಾವ ಹಂತಕ್ಕೆ ತಲುಪಿದೆ, ಯಾರಿಗೆ ಶಿಕ್ಷೆ ಆಗಿದೆ ಎಂಬುದನ್ನು ಕೇಂದ್ರ ಸರಕಾರವೇ ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ತಪ್ಪಿತಸ್ಥರಿಗೆ ಕಠಿಣ ಕ್ರಮ ಆಗುತ್ತಿದ್ದರೆ, ಈ ಸೋರಿಕೆ ತಡೆಯಬಹುದಿತ್ತು. ನಿವೃತ್ತ ಸರಕಾರಿ ಅಧಿಕಾರಿಗಳ, ಮಂತ್ರಿಗಳ ಬೆಂಬಲದ ಕೋಚಿಂಗ್ ಸೆಂಟರ್‌ಗಳ ಮಾಫಿಯಾ ಈ ಸೋರಿಕೆ ಹಿಂದಿರುವ ಸಾಧ್ಯತೆ ಇದೆ. ಇದು ಲಕ್ಷಾಂತರ ಮಕ್ಕಳ ಭವಿಷ್ಯದ ಪ್ರಶ್ನೆ ಆಗಿದ್ದು, ಸರಕಾರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ಬೇಜವಾಬ್ದಾರಿಯ ವರ್ತನೆ ಎಂದರು.
ಪ್ರಕರಣವನ್ನು ಸಿಬಿಐಯಿಂದ ತನಿಖೆ ನಡೆಸುವುದಾಗಿ ಹೇಳಲಾಗಿದೆ. ಆದರೆ, ಸರಕಾರಿ ತನಿಖಾ ಸಂಸ್ಥೆಗಳ ಬಗ್ಗೆ ಅನುಮಾನ ಪಡುವ ಪರಿಸ್ಥಿತಿ ಇದೆ. ಡೀಸೆಲ್, ಪೆಟ್ರೋಲ್ ಮಿತವಾಗಿ ಬಳಸಿ, ಚಿನ್ನ ಖರೀದಿಸಬೇಡಿ ಎಂಬುದಾಗಿ ಜನರಿಗೆ ತ್ಯಾಗದ ಪಾಠ ಮಾಡುವ ಪ್ರಧಾನಿ ಮೋದಿ ಅವರು ಅಧಿಕಾರ ತ್ಯಾಗ ಮಾಡಿದರೆ ದೇಶದ ಜನರಿಗೆ ನೆಮ್ಮದಿ ಸಿಗಲಿದೆ ಎಂದರು.
ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ಆರಂಭದಲ್ಲಿ ಎಲ್‌ಪಿಜಿ ಸಹಾಯಧನ ತ್ಯಜಿಸಿ ಎಂದು ಕರೆ ನೀಡಿದ್ದರು. ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರ ಎಲ್‌ಪಿಜಿ ದರ ಜನಸಾಮಾನ್ಯರಿಗೆ ಹೊರೆ ಆಗದಿರಲೆಂದು ಸಹಾಯಧನ ನೀಡುತ್ತಿತ್ತು. ಕೇಂದ್ರ ಸರಕಾರದ ನೀತಿಗಳು ಹೆಣ್ಣು ಮಕ್ಕಳ ಭಾವನೆ ಪ್ರಶ್ನಿಸುವಂತಿದೆ ಎಂದರು.
ಯುದ್ಧದ ಹೊರತಾಗಿ ಅಮೆರಿಕದ ಡಾಲರ್ ಮೌಲ್ಯ ಹೆಚ್ಚಾಗುತ್ತಿದೆ. ಆದರೆ, ನಮ್ಮ ಪರಿಸ್ಥಿತಿ ಎಲ್ಲಿಗೆ ತಲುಪಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ದರ ಏರಿಕೆಯಿಂದ ದಿನ ಬಳಕೆ ವಸ್ತುಗಳ ಮೇಲೆಯೂ ಪರಿಣಾಮ ಬೀರಿದೆ. ಕೇಂದ್ರ ಸರಕಾರ ಜನಸಾಮಾನ್ಯರ ಹಿತ ಕಾಯುವ ಬದಲು ಶ್ರೀಮಂತರ, ಬಂಡವಾಳಶಾಹಿಗಳ ರಕ್ಷಣೆ ಮಾಡುತ್ತಿದೆ ಎಂದರು.
ಮುಖಂಡರಾದ ಶಶಿಧರ ಹೆಗ್ಡೆ, ಮಮತಾ ಗಟ್ಟಿ, ಅಪ್ಪಿ,ವಿಕಾಸ್ ಶೆಟ್ಟಿ, ಬೇಬಿ ಕುಂದರ್, ಜಯಶೀಲ ಅಡ್ಯಂತಾಯ, ಸುಹಾನ್ ಆಳ್ವ, ಶುಭೋದಯ ಆಳ್ವ, ಯೋಗೀಶ್, ಶಬೀರ್ ಸಿದ್ಧಕಟ್ಟೆ, ನಝೀರ್ ಬಜಾಲ್, ಪ್ರಕಾಶ್ ಸಾಲಿಯಾನ್ ಇದ್ದರು.
What do you feel about this post?
Like
Love
Happy
Haha
Sad
