ಗುಡ್ಡ ಕುಸಿತ, ನೆರೆಯಿಂದ ಆಗುವ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ

ಶಿರಸಿ ಕಾರವಾರ ಜಿಲ್ಲಾ ಸುದ್ದಿ

Spread the love

ಕಾರವಾರ: ಮುಂಗಾರು ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತ ಮತ್ತು ನೆರೆಯಿಂದ ಯಾವುದೇ ಅನಾಹುತಗಳಾಗದಂತೆ ಅಗತ್ಯ ಇರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಈ ಅವಧಿಯಲ್ಲಿ
ಕಂಡು ಬರುವ ಸಮಸ್ಯೆಗಳನ್ನು ಎದುರಿಸಲು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸನ್ನದ್ದರಾಗಿರುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರು ನಿರ್ದೇಶನ ನೀಡಿದರು.

<

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಸಿದ್ದತೆ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆಗಾಲದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಎಲ್ಲಾ ತಹಶೀಲ್ದಾರ ಕಚೇರಿಗಳಲ್ಲಿ
ಮತ್ತು ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ನಿರಂತರ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿನ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಪೊಲೀಸ್, ಅಗ್ನಿಶಾಮಕ, ಅರಣ್ಯ, ಹೆಸ್ಕಾಂ, ಬಿ.ಎಸ್.ಎನ್.ಎಲ್ ಕಚೇರಿಯ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸುವಂತೆ ಅವರು ತಿಳಿಸಿದರು.

ರಾಜ್ಯ ವಿಪತ್ತು ಉಪಶಮನ ನಿಧಿ ಅಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳಿಗೆ ಪಂಚಾಯತ್ ರಾಜ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಾದೇಶ ನೀಡಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಗಳನ್ನು ಈ ತಿಂಗಳೊಳಗೆ ಮುಕ್ತಾಯಗೊಳಿಸುವಂತೆ ಹಾಗೂ ರಸ್ತೆಗಳ ಪಕ್ಕದಲ್ಲಿ ಚರಂಡಿ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಹಾಗೂ ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ಎಚ್ಚರ ವಹಿಸಬೇಕು, ಹೆದ್ದಾರಿಯಲ್ಲಿನ ಅಪಾಯಕಾರಿ ಪ್ರದೇಶಗಳಲ್ಲಿ ಸೂಕ್ತ ಎಚ್ಚರಿಕೆ ಫಲಕ, ಬ್ಯಾರಿಕೇಡ್ ಸೇರಿದಂತೆ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಶಿರೂರುನಲ್ಲಿ ಕೈಗೊಂಡಿರುವ ಕಾಮಗಾರಿಯನ್ನು ಈ ತಿಂಗಳ ಅಂತ್ಯದಲ್ಲಿ ಮುಕ್ತಾಯಗೊಳಿಸಲಾಗುವುದು, ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಮಳೆ ನೀರು ನಿಲ್ಲದಂತೆ ಡ್ರಜ್ಜಿಂಗ್ ಕೈಗೊಳ್ಳಲಾಗುವುದು, ಅಪಾಯಕಾರಿ ಸ್ಥಳಗಳಲ್ಲಿ ನೋ ಪಾರ್ಕಿಂಗ್ ಝೋನ್ ಮಾಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

ನೌಕಾನೆಲೆ ವ್ಯಾಪ್ತಿಯ ಪ್ರದೇಶಗಳಲ್ಲಿನ ಗ್ರಾಮಗಳಲ್ಲಿ ಮಳೆ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಈಗಾಗಲೇ ಕೈಗೊಂಡಿರುವ ಕಾಮಗಾರಿಯನ್ನು ಮುಕ್ತಾಯಗೊಳಿಸುವಂತೆ ಮತ್ತು ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಜಿಲ್ಲೆಯ ಶಾಲೆ, ಅಂಗನವಾಡಿ, ಕಾಲೇಜುಗಳ ವ್ಯಾಪ್ತಿಯಲ್ಲಿನ ಅಪಾಯಕಾರಿ ಮರಗಳು ಮತ್ತು ವಿದ್ಯುತ್ ತಂತಿಗಳನ್ನು ತೆರವುಗೊಳಿಸುವ ಕುರಿತಂತೆ ಮತ್ತು ಶಿಥಿಲ ಕಟ್ಟಡಗಳಿದ್ದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ ಅವರು, ಸುರಕ್ಷತೆ ಕುರಿತಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ವರದಿ ನೀಡಬೇಕು. ಈ ಪ್ರದೇಶಗಳಲ್ಲಿ ಯಾವುದೇ ಅವಘಢಗಳು ಸಂಭವಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಜಿಲ್ಲೆಯಲ್ಲಿನ ಸೇತುವೆಗಳು, ಕಾಲು ಸಂಕಗಳ ದೃಢತೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ವರದಿ ನೀಡುವಂತೆ ಸೂಚಿಸಿದರು.

ಹೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕ ಕಡಿತವಾದಲ್ಲಿ ತುರ್ತು ಮರು ಸಂಪರ್ಕಕ್ಕೆ ಅಗತ್ಯವಿರುವ ಉಪಕರಣಗಳು,
ವಾಹನಗಳು ಮತ್ತು ಸಿಬ್ಬಂದಿಗಳನ್ನು ಸಿದ್ದವಾಗಿಟ್ಟುಕೊಂಡಿರಬೇಕು, ತುರ್ತು ಸಂದರ್ಭದಲ್ಲಿ ಜಿಲ್ಲಾ ಕಂಟ್ರೋಲ್ ರೂಂ ಗೆ ತಕ್ಷಣ ಮಾಹಿತಿ ನೀಡಬೇಕು. ತುರ್ತು ಸಂದರ್ಭದಲ್ಲಿ ಎಲ್ಲಾ ರಕ್ಷಣಾ ಉಪಕರಣಗಳು ಮತ್ತು ಸಂಪನ್ಮೂಲಗಳು ನೆರವಿಗೆ ದೊರೆಯುವಂತೆ ಸಿದ್ದವಾಗಿಟ್ಟುಕೊಳ್ಳಬೇಕು ಎಂದರು.

ಅಗ್ನಿಶಾಮಕ ಇಲಾಖೆ ವತಿಯಿಂದ ಎಲ್ಲಾ ಅಗತ್ಯ ಸುರಕ್ಷತಾ ಪರಿಕರಗಳು ಲಭ್ಯವಿರುವಂತೆ ಎಚ್ಚರವಹಿಸಬೇಕು, ಮುಂಗಾರು ಸಮರ್ಪಕ ನಿರ್ವಹಣೆ ಜಿಲ್ಲೆಯ ಎಲ್ಲಾ ತಾಲೂಕು ಮತ್ತು ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಭೆಗಳನ್ನು ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಈಗಾಗಲೇ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಪಾಯಕಾರಿಯಾಗಿ ಕಂಡುಬಂದಿರುವ 1,780 ಮರಗಳನ್ನು ಗುರುತಿಸಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ವರದಿ ನೀಡಿದ್ದು, ಅರಣ್ಯ ಇಲಾಖೆ ವತಿಯಿಂದ ಈ ಮರಗಳನ್ನು ಪರಿಶೀಲಿಸಿ, ಶೀಘ್ರದಲ್ಲಿ ಅವುಗಳನ್ನು ತೆರವುಗೊಳಿಸುವ ಅಥವಾ ಕೊಂಬೆಗಳನ್ನು ಕತ್ತರಿಸುವ ಕಾರ್ಯವನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಪ್ರಸ್ತುತ ಜಿಲ್ಲೆಯಲ್ಲಿರುವ ಮಳೆ ಮಾಪನ ಯಂತ್ರಗಳ ದುರಸ್ತಿ/ ಬದಲಾವಣೆ /ಸ್ಥಳಾಂತರ ಕಾರ್ಯವನ್ನು ಕೈಗೊಳ್ಳುವ
ಕುರಿತಂತೆ ರಾಜ್ಯ ಮಟ್ಟದಲ್ಲಿ ಈಗಾಗಲೇ ಟೆಂಡರ್ ಆಗಿದ್ದು, ಜಿಲ್ಲೆಗೆ ಹಂಚಿಕೆಯಾಗಿರುವ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸಿ, ಎಲ್ಲ ಮಳೆ ಮಾಪನ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಎಲ್ಲಾ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.

ಮಾನ್ಸೂನ್ ಅವಧಿಯಲ್ಲಿ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು, ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯ ಮತ್ತು ಸಹಕಾರದಿಂದ ಒಟ್ಟಾಗಿ ಕಾರ್ಯನಿರ್ವಹಿಸುವುದರ ಮೂಲಕ ಮಾನ್ಸೂನ್ ವೇಳೆಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಅಗತ್ಯವಿರುವ ನೆರವು ಒದಗಿಸಬೇಕು ಎಂದರು.

ಜಿಲ್ಲೆಯ ಸಾರ್ವಜನಿಕರು ಯಾವುದೇ ವಿಪತ್ತು ಸಂದರ್ಭದಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರದಿರುವ ತುರ್ತು
ಕಾರ್ಯಚರಣೆ ಕೇಂದ್ರದ ಸಹಾಯವಾಣಿ ಸಂಖ್ಯೆ 94835 11015 ನ್ನು ನಿರಂತರ ಸಂಪರ್ಕಿಸಿ ಅಗತ್ಯ ನೆರವು ಪಡೆಯಬಹುದು ಎಂದ ಅವರು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತೆರದಿರುವ ತಾಲೂಕು ಸಹಾಯವಾಣಿ ಸಂಖ್ಯೆಯ ವಿವರಗಳನ್ನು ಸಾರ್ವಜನಿಕರ ಮಾಹಿತಿಗೆ ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಶ್ರವಣ ಕುಮಾರ್, ಜಿ.ಪಂ. ಉಪ ಕಾರ್ಯದರ್ಶಿ ಅಲ್ಲಾ ಭಕ್ಷ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. ವರ್ಚುವಲ್ ಮೂಲಕ ಜಿ..ಪಂ. ಸಿಇಒ ಡಾ.ದಿಲೀಷ್ ಶಶಿ, ಜಿಲ್ಲೆಯ ಎಲ್ಲಾ
ತಹಶೀಲ್ದಾರ್‌ಗಳು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *