ಧರ್ಮಸ್ಥಳ: ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಬಿಡುಗಡೆಗೆ ಮುನ್ನ ನಟ ಯಶ್ ಮಂಗಳವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಚಿತ್ರದ ಯಶಸ್ಸು ಹಾಗೂ ಅಭಿಮಾನಿಗಳ ಆಶೀರ್ವಾದಕ್ಕಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಬೆಳಿಗ್ಗೆ ಚೆನ್ನೈನಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯಶ್, ಬಳಿಕ ಧರ್ಮಸ್ಥಳಕ್ಕೆ ತೆರಳಿದರು. ಕ್ಷೇತ್ರದ ಪ್ರಮುಖರಾದ ಹರ್ಷೇಂದ್ರ ಕುಮಾರ್ ಅವರು ಯಶ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದ ಅವರು, ದೇವಸ್ಥಾನಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಗರ್ಭಗುಡಿ ಸಮೀಪ 15 ನಿಮಿಷಗಳ ಕಾಲ ಪ್ರಾರ್ಥನೆ ಸಲ್ಲಿಸಿದ ಯಶ್, ಬಳಿಕ ಪತ್ರಕರ್ತರ ಜತೆಗೆ ಮಾತನಾಡಿ, ಪ್ರತಿವರ್ಷ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತೇನೆ. ಪ್ರತಿಯೊಂದು ಸಿನಿಮಾ ಬಿಡುಗಡೆಗೆ ಮೊದಲು ಇಲ್ಲಿಗೆ ಬರುತ್ತೇನೆ. ಈ ಬಾರಿ ಕೆಲಸದ ಒತ್ತಡದಿಂದ ಸ್ವಲ್ಪ ತಡವಾಗಿ ಬಂದಿದ್ದೇನೆ. ಎಲ್ಲ ಕೆಲಸಗಳನ್ನು ಮುಗಿಸಿ ಬಂದಿದ್ದೇನೆ. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ. ಜನರ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಅನುಗ್ರಹ ಎಲ್ಲರ ಮೇಲಿರಲಿ ಎಂದರು.
‘ಟಾಕ್ಸಿಕ್’ ಚಿತ್ರದ ಮುಂಗಡ ಬುಕ್ಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಎಲ್ಲವೂ ದೇವರ ಆಶೀರ್ವಾದ ಮತ್ತು ಜನರ ಬೆಂಬಲ. ನಾವು ನಮ್ಮ ಕೆಲಸ ಮಾಡಿದ್ದೇವೆ. ಚಿತ್ರವು ಬುಧವಾರ ವಿಶ್ವದಾದ್ಯಂತ 12 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸೆನ್ಸಾರ್ ಮಂಡಳಿಯಿಂದ ಯಾವುದೇ ಕತ್ತರಿ ಇಲ್ಲದೇ ‘ಎ’ ಪ್ರಮಾಣಪತ್ರ ಪಡೆದಿದೆ ಎಂದರು.
ನಟ ಯಶ್ ಬರುವ ಸುದ್ದಿ ತಿಳಿದು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನದ ಸುತ್ತಮುತ್ತ ಸೇರಿದ್ದರು. ಮೆಚ್ಚಿನ ನಟನನ್ನು ಕಂಡು ಅಭಿಮಾನಿಗಳು ಸಂಭ್ರಮಿಸಿದರು. ಯಶ್ ಕೂಡ ಅಭಿಮಾನಿಗಳತ್ತ ಕೈಬೀಸಿ ಸಂತಸ ಹಂಚಿಕೊಂಡರು.


