ಕಣ್ಣಿಗೆ ಹಬ್ಬವಾದ ಕನ್ನಡ ಹಬ್ಬ: ಶಾರದಾ ವಿದ್ಯಾನಿಕೇತನದಲ್ಲಿ ಭಾಷಾ ಸಂಭ್ರಮ, ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ, ಕಾರ್ಯಕ್ರಮಕ್ಕೆ ಚಾಲನೆ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ತಲಪಾಡಿ: ಕನ್ನಡ ಭಾಷೆ, ನಾಡು-ನುಡಿ ಹಾಗೂ ಸಂಸ್ಕೃತಿಯ ವೈಭವವನ್ನು ಅನಾವರಣಗೊಳಿಸಿದ ಕನ್ನಡ ಹಬ್ಬವು ತಲಪಾಡಿಯ ದೇವಿನಗರದಲ್ಲಿರುವ ಶಾರದಾ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ನ.26ರಂದು ಸಂಭ್ರಮದಿಂದ ನಡೆಯಿತು.

ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಆಕರ್ಷಕ ವೇದಿಕೆ ಹಾಗೂ ಸಾಂಪ್ರದಾಯಿಕ ಅಲಂಕಾರ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಸರಗೋಡು ಸರ್ಕಾರಿ ಮಹಾವಿದ್ಯಾಲಯದ ನಾಥಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಡಾ. ರತ್ನಾಕರ ಮಲ್ಲಮೂಲೆ ದೀಪ ಬೆಳಗಿಸಿ, ಭಾರತ ಮಾತೆ ಹಾಗೂ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ‘ಹಚ್ಚೇವು ಕನ್ನಡದ ದೀಪ’ ಗೀತೆಯನ್ನು ಪ್ರಸ್ತುತಪಡಿಸಿದರು.

ವಿದ್ಯಾರ್ಥಿಗಳ ನಾಡಗೀತೆ ಹಾಗೂ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಮುಂದುವರಿಯಿತು. ಕನ್ನಡ ವಿಭಾಗದ ಉಪನ್ಯಾಸಕ ಅತ್ತೂರು ಸುರೇಶ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು.

ಮುಖ್ಯ ಅತಿಥಿ ಡಾ. ರತ್ನಾಕರ ಮಲ್ಲಮೂಲೆ ಕನ್ನಡ ಭಾಷೆಯ ಮೇಲಿನ ಪ್ರೀತಿ, ಸಂಸ್ಕೃತಿಯ ಅರಿವು ಹಾಗೂ ಭಾಷೆಯ ಬೆಳವಣಿಗೆ ಮತ್ತು ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಉದಾಹರಣೆಗಳೊಂದಿಗೆ ಮಾತನಾಡಿ ಗಮನ ಸೆಳೆದರು.

ವಿದ್ಯಾರ್ಥಿ ಚೇತನ್ ಕುಮಾರ್ ಕನ್ನಡ ನಾಡು-ನುಡಿಯ ಸಂಸ್ಕೃತಿಯ ಕುರಿತು ಮಾತನಾಡಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ದೀಕ್ಷ ಮುಖ್ಯ ಅತಿಥಿಯನ್ನು ಸಭೆಗೆ ಪರಿಚಯಿಸಿದರು. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ತಕ್ಷಣದ ರಸಪ್ರಶ್ನೆ ಕಾರ್ಯಕ್ರಮ ಕುತೂಹಲ ಮೂಡಿಸಿತು. ರುಜುಲಾ ಗೌಡ ಮತ್ತು ಮನು ರೆಡ್ಡಿ ರಸಪ್ರಶ್ನೆ ನಡೆಸಿಕೊಟ್ಟರು.

ಮುದ್ದಣ-ಮನೋರಮೆಯರ ‘ತಿರುಳುಗನ್ನಡದ ಬೆಳ್ನುಡಿ’ ಸಂವಾದವನ್ನು ಕಂಠಪಾಠ ಮಾಡಿ ಪ್ರಸ್ತುತಪಡಿಸಿದ ಪ್ರಜ್ಞಾ ಹಾಗೂ ಚೇತನ್ ಕುಮಾರ್ ಬಹುಮಾನ ಗಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಎಂ.ಬಿ. ಪುರಾಣಿಕ್ ಮಾತನಾಡಿ, ಕಾಸರಗೋಡು ಕರ್ನಾಟಕದಿಂದ ಬೇರ್ಪಟ್ಟಿರುವ ಕುರಿತು ತಮ್ಮ ಬೇಸರ ವ್ಯಕ್ತಪಡಿಸಿದರು. ಬಳಿಕ ವಿದ್ಯಾರ್ಥಿನಿಯರಿಂದ ಕನ್ನಡ ಗೀತೆಗಳಿಗೆ ನೃತ್ಯ ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ‘ಕೀಚಕವಧೆ’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.

ಕಾಲೇಜಿನ ಪ್ರಾಂಶುಪಾಲ ವಿನಾಯಕ ಬಿ.ಜಿ. ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ವಸತಿ ನಿಲಯ ಪ್ರೌಢಶಾಲೆಯ ಪ್ರಾಂಶುಪಾಲೆ ಸುಷ್ಮಾ ದಿನಕರ್, ದೈನಿಕ ವಿಭಾಗದ ಪ್ರಾಂಶುಪಾಲ ಮೋಹನ್ ದಾಸ್, ಆಡಳಿತ ಪ್ರಬಂಧಕ ಪ್ರಫುಲ್ ಕುಮಾರ್ ಇದ್ದರು. ಅನ್ವಿತ ಪ್ರಾರ್ಥಿಸಿದರು. ವಿಹಾನ್ ಕುಂಬರಡಿ ವಂದಿಸಿದರು. ಮಿಥುನ್ ಮತ್ತು ಯುಕ್ತ ಶ್ರಾವ್ಯ ನಿರೂಪಿಸಿದರು.

Leave a Reply

Your email address will not be published. Required fields are marked *