ಮೂಡುಬಿದಿರೆ: ದೇಶದ ಅತಿದೊಡ್ಡ ಉದ್ಯೋಗ ಮೇಳಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಪ್ರಗತಿ–2026’ರ 16ನೇ ಆವೃತ್ತಿಗೆ ಶುಕ್ರವಾರ ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಚಾಲನೆ ದೊರೆಯಿತು. ಮೊದಲ ದಿನವೇ 13,016 ಉದ್ಯೋಗಾಕಾಂಕ್ಷಿಗಳು ಮೇಳಕ್ಕೆ ಆಗಮಿಸಿದ್ದು, 326 ಕಂಪನಿಗಳು ಉದ್ಯೋಗ ನೇಮಕಾತಿಗಾಗಿ ಭಾಗವಹಿಸಿವೆ.
ಕಾರ್ಯಕ್ರಮ ಉದ್ಘಾಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಬದಲಾಗುತ್ತಿರುವ ಉದ್ಯೋಗ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ಯುವಜನರು ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿಕ್ಷಣ ಮಾತ್ರವೇ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಕಾಗುವುದಿಲ್ಲ. ಶಿಕ್ಷಣದ ಜತೆಗೆ ಪ್ರಾಯೋಗಿಕ ಕೌಶಲ್ಯವೂ ಅತ್ಯಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಪ್ರಸ್ತುತವಾಗಿರಲು ಯುವಜನರು ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ಉನ್ನತೀಕರಿಸಿಕೊಳ್ಳಬೇಕು ಎಂದರು.
‘ಶಿಕ್ಷಣ ಪಾಸ್‌ಪೋರ್ಟ್, ಕೌಶಲ್ಯ ವೀಸಾ’
“ಶಿಕ್ಷಣ ಪಾಸ್‌ಪೋರ್ಟ್‌ನಂತಿದ್ದರೆ, ಕೌಶಲ್ಯ ವೀಸಾದಂತೆ” ಎಂದು ರೂಪಕದ ಮೂಲಕ ವಿವರಿಸಿದ ಯು.ಟಿ. ಖಾದರ್, ಉದ್ಯಮ ಕ್ಷೇತ್ರಕ್ಕೆ ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯಗಳನ್ನು ಯುವಜನರು ರೂಢಿಸಿಕೊಳ್ಳಬೇಕು ಎಂದರು.
ಸಾಮಾಜಿಕ ಜಾಲತಾಣಗಳನ್ನು ಕೇವಲ ಮನರಂಜನೆಗಾಗಿ ಬಳಸದೆ, ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲು ಹಾಗೂ ವೃತ್ತಿಪರ ಸಂಪರ್ಕಗಳನ್ನು ಬೆಳೆಸಿಕೊಳ್ಳಲು ಬಳಸಬೇಕು. “ನೆಟ್‌ವರ್ಕ್ ಯಾವಾಗಲೂ ನೆಟ್‌ವರ್ತ್ ಆಗಿರುತ್ತದೆ” ಎಂದ ಅವರು, ವೃತ್ತಿಜೀವನದ ಬೆಳವಣಿಗೆಯಲ್ಲಿ ಉತ್ತಮ ವೃತ್ತಿಪರ ಸಂಪರ್ಕಗಳ ಮಹತ್ವವನ್ನು ವಿವರಿಸಿದರು.
ಉದ್ಯೋಗಕ್ಕೆ ಸೇರಿದ ಬಳಿಕ ಸಂಸ್ಥೆಯು ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಕಾರ್ಯಕ್ಷಮತೆ, ನಡವಳಿಕೆ ಮತ್ತು ಬದ್ಧತೆಯ ಮೂಲಕ ಸಂಸ್ಥೆಯ ವಿಶ್ವಾಸವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃತಕ ಬುದ್ಧಿಮತ್ತೆ ಅವಕಾಶವಾಗಿ ಬಳಸಿ
ಕೃತಕ ಬುದ್ಧಿಮತ್ತೆ ಉದ್ಯೋಗ ಕ್ಷೇತ್ರದ ಸ್ವರೂಪವನ್ನು ವೇಗವಾಗಿ ಬದಲಾಯಿಸುತ್ತಿದೆ. ಅದನ್ನು ಉದ್ಯೋಗ ಕಸಿದುಕೊಳ್ಳುವ ತಂತ್ರಜ್ಞಾನ ಎಂದು ಪರಿಗಣಿಸುವ ಬದಲು, ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನೆರವಾಗುವ ಸಾಧನವಾಗಿ ಯುವಜನರು ಬಳಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.
‘ವಿಕಸಿತ ಭಾರತಕ್ಕೆ ಇಂತಹ ಮೇಳಗಳು ಅಗತ್ಯ’
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಯುವಜನರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರಯತ್ನವನ್ನು ಶ್ಲಾಘಿಸಿದರು.
ಲೋಕಸಭೆಯ ಅಧಿವೇಶನ ನಡೆಯುತ್ತಿದ್ದರೂ, ತಮ್ಮ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಉದ್ಯೋಗ ಮೇಳ ಆಯೋಜಿಸಿರುವುದಕ್ಕೆ ಮಹತ್ವ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ರೂಪಿಸಿರುವ ಈ ಮಾದರಿಯು ವಿಕಸಿತ ಭಾರತದ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ದೇಶವು ವಿಕಸಿತ ಭಾರತದ ಗುರಿ ಸಾಧಿಸಬೇಕಾದರೆ, ಯುವಜನರಿಗೆ ಶಿಕ್ಷಣದ ಜತೆಗೆ ಉದ್ಯೋಗ ಮತ್ತು ಅವಕಾಶಗಳನ್ನು ಸೃಷ್ಟಿಸುವ ಇಂತಹ ಸಂಸ್ಥೆಗಳು ಹಾಗೂ ಉಪಕ್ರಮಗಳು ಅಗತ್ಯ ಎಂದು ಹೇಳಿದರು.
‘ಶಿಕ್ಷಣದ ಜತೆಗೆ ಸಾಮಾನ್ಯ ಜ್ಞಾನವೂ ಮುಖ್ಯ’
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂಆರ್‌ಜಿ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ, ಶಿಕ್ಷಣದ ಜತೆಗೆ ಪ್ರಾಯೋಗಿಕ ಜ್ಞಾನ ಮತ್ತು ಸಾಮಾನ್ಯ ಜ್ಞಾನವೂ ಅತ್ಯಂತ ಅಗತ್ಯ ಎಂದರು.
ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ, ಸೂಕ್ತ ನಿರ್ಧಾರ ಕೈಗೊಳ್ಳುವ ಹಾಗೂ ಸವಾಲುಗಳಿಗೆ ಸಮರ್ಥವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಯುವಜನರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್, ತಮ್ಮ ಕ್ಷೇತ್ರದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಆಳ್ವಾಸ್ ಪ್ರಗತಿಯ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರಿಗೆ ನಿರಂತರ ಪ್ರಯೋಜನ ದೊರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಶಾಸಕ ಹರೀಶ್ ಪೂಂಜಾ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರಣ್ ವರ್ಮ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧಿಯಾ, ಆಳ್ವಾಸ್ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು.
ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕಿ ಪ್ರಿಯಾ ಸಿಕ್ವೇರಾ ಅತಿಥಿಗಳನ್ನು ಪರಿಚಯಿಸಿದರು.
ಆಳ್ವಾಸ್ ಪ್ರಗತಿಯ ಆರಂಭಿಕ ದಿನಗಳಲ್ಲಿ ಉದ್ಯೋಗ ಮೇಳಗಳ ಆಯೋಜನೆಗೆ ಅಮೂಲ್ಯ ಕೊಡುಗೆ ನೀಡಿದ ದಿವಂಗತ ಎ.ಕೆ. ಮಹೇಶ್ ಶೇಖರ್ ಅವರ ಸ್ಮರಣಾರ್ಥ ಉದ್ಘಾಟನಾ ವೇದಿಕೆಯನ್ನು ಸಮರ್ಪಿಸಲಾಯಿತು.
ಕರಾವಳಿಯ ಸಾಧಕರಿಗೆ ಸನ್ಮಾನ
ಉದ್ಘಾಟನಾ ಸಮಾರಂಭದಲ್ಲಿ ಕರಾವಳಿಯ ಉದ್ಯಮ ಹಾಗೂ ಉದ್ಯೋಗ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ ಪ್ರಮುಖರನ್ನು ಸನ್ಮಾನಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಪರವಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ, ಎಂಆರ್‌ಜಿ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ, ಭವಾನಿ ಶಿಪ್ಪಿಂಗ್ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಕುಸುಮೋದರ ಡಿ. ಶೆಟ್ಟಿ, ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿನ್ಸೆಂಟ್ ಕುಟಿನ್ಹಾ ಹಾಗೂ ಎಕ್ಸ್ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪನಿಯ ಸಹ-ಸಂಸ್ಥಾಪಕ ಮೊಹಮ್ಮದ್ ಅಶ್ಫಾಕ್ ಅವರನ್ನು ಸನ್ಮಾನಿಸಲಾಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಗಾಲಿಕುರ್ಚಿಯಲ್ಲಿ ಬಂದ ಭವ್ಯಶ್ರೀಗೆ ಉದ್ಯೋಗದ ಹೊಸ ದಾರಿ
ಆಳ್ವಾಸ್ ಪ್ರಗತಿ–2026, ಕಳೆದ ಒಂದು ವರ್ಷದಿಂದ ಉದ್ಯೋಗಕ್ಕಾಗಿ ಕಾಯುತ್ತಿದ್ದ ಭವ್ಯಶ್ರೀ ಅವರ ಬದುಕಿನಲ್ಲಿ ಹೊಸ ತಿರುವು ನೀಡಿದೆ.
ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಒಂದು ವರ್ಷದ ಹಿಂದೆ ಎಂ.ಕಾಂ ಪದವಿ ಪಡೆದಿದ್ದ ಭವ್ಯಶ್ರೀ ಉದ್ಯೋಗಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ದೈಹಿಕ ವಿಶೇಷಚೇತನರಾಗಿರುವ ಅವರು ತಮ್ಮ ಸಹೋದರನ ನೆರವಿನಿಂದ ಗಾಲಿಕುರ್ಚಿಯಲ್ಲಿ ಉದ್ಯೋಗ ಮೇಳಕ್ಕೆ ಆಗಮಿಸಿದರು.
ಸಂದರ್ಶನ ಎದುರಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ ಅವರು, ಮೈಸೂರಿನ ರೆಡ್ಡೀಸ್ ಫೌಂಡೇಷನ್‌ನಲ್ಲಿ ಲೆಕ್ಕಪತ್ರ ವಿಭಾಗದ ಹುದ್ದೆಗೆ ಆಯ್ಕೆಯಾಗಿದ್ದಾರೆ.
“ಉದ್ಯೋಗ ಸಿಕ್ಕಿರುವುದು ತುಂಬಾ ಸಂತೋಷ ತಂದಿದೆ. ಕಳೆದ ಒಂದು ವರ್ಷದಿಂದ ಉದ್ಯೋಗಕ್ಕಾಗಿ ಕಾಯುತ್ತಿದ್ದೆ. ಆಳ್ವಾಸ್ ಪ್ರಗತಿಗೆ ಬಂದು ಸಂದರ್ಶನ ಎದುರಿಸಿದ ಬಳಿಕ ನನಗೆ ಈ ಅವಕಾಶ ದೊರೆತಿದೆ. ಮೈಸೂರಿಗೆ ತೆರಳಿ ಕೆಲಸ ಮಾಡಲು ಸಿದ್ಧಳಾಗಿದ್ದೇನೆ” ಎಂದು ಭವ್ಯಶ್ರೀ ಸಂತಸ ವ್ಯಕ್ತಪಡಿಸಿದರು.
ಮೊದಲ ದಿನದ ಅಂಕಿ-ಅಂಶ
-
ಆನ್‌ಲೈನ್ ನೋಂದಣಿ: 13,247 ಉದ್ಯೋಗಾಕಾಂಕ್ಷಿಗಳು
-
ಸ್ಥಳದಲ್ಲೇ ನೋಂದಣಿ: 83 ಅಭ್ಯರ್ಥಿಗಳು
-
ಉದ್ಯೋಗ ಮೇಳದಲ್ಲಿ ಭಾಗವಹಿಸಿದ ಕಂಪನಿಗಳು: 326
- ಮೊದಲ ದಿನ ಮೇಳಕ್ಕೆ ಆಗಮಿಸಿದ ಉದ್ಯೋಗಾಕಾಂಕ್ಷಿಗಳು: 13,016
What do you feel about this post?
Like
Love
Happy
Haha
Sad



